ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಪಾತ್ ವ್ಯಾಪಾರಿಗಳಿಗೆ ಮೈಕ್ರೋ ಫೈನಾನ್ಸ್

By Mahesh
|
Google Oneindia Kannada News

Minister Lakshman Savadi
ಮೈಸೂರು, ಆ.19: ಮೀಟರ್ ಬಡ್ಡಿ ದಂಧೆಯಿಂದ ರಸ್ತೆಬದಿ (ಫುಟ್‌ಪಾತ್ )ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಸದ್ಯದಲ್ಲೇ ಮೈಕ್ರೋ ಫೈನಾನ್ಸ್ ಲೋನ್ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ರಾಜ್ಯದ ಪಟ್ಟಣ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಕಡುಬಡವರು ಸಾಲದ ಸಂಕಷ್ಟದಲ್ಲಿ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದ ಮಾದರಿಯಲ್ಲಿ ಮೈಕ್ರೋ ಫೈನಾನ್ಸ್ ಸೌಲಭ್ಯ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಲೇವಾದೇವಿ ವ್ಯವಹಾರಸ್ಥರಿಂದ ರಸ್ತೆ ಬದಿ ವ್ಯಾಪಾರಿಗಳಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ ಎಂದು ಹೇಳಿದರು.

ಪ್ರಸ್ತುತ ಬಾಂಗ್ಲಾದೇಶದಲ್ಲಿ ಮಾತ್ರ ಈ ರೀತಿಯ ಯೋಜನೆ ಜಾರಿಯಾಗಿದ್ದು, (ನೊಬೇಲ್ ಪ್ರಶಸ್ತಿ ವಿಜೇತ ಮಹಮದ್ ಯೂನಸ್ ಆರಂಭಿಸಿದ್ದು)ಅದ್ಭುತ ಯಶಸ್ಸು ಕಂಡಿದೆ. ಆದ್ದರಿಂದ ಸದರಿ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡುವ ಮುನ್ನ ಸಾಧಕಬಾಧಕ ಕುರಿತಂತೆ ಪರಿಶೀಲಿಸುವ ಸಲುವಾಗಿ ಸಹಕಾರ ಇಲಾಖೆಯ ಹಿರಿಯ ಅಕಾರಿಗಳು ಸದ್ಯದಲ್ಲೇ ಬಾಂಗ್ಲಾ ದೇಶಕ್ಕೆ ತೆರಳಿ ಅಧ್ಯಯನ ನಡೆಸಲಿದ್ದಾರೆ ಎಂದು ತಿಳಿಸಿದರು.

ಈ ಯೋಜನೆ ಅನುಷ್ಠಾನಗೊಂಡಲ್ಲಿ ರಸ್ತೆ ಬದಿ ವ್ಯಾಪಾರಿಗಳಿಗೆ ನೂರು ರೂಪಾಯಿಗೆ ವಾರ್ಷಿಕ ಹತ್ತು ರೂ.ಗಳ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಮೀಟರ್ ಬಡ್ಡಿ ದಂಧೆ ನಡೆಸುವವರು ರಸ್ತೆ ಬದಿ ವ್ಯಾಪಾರಿಗಳಿಗೆ ಬೆಳಗ್ಗೆ ನೂರು ರೂ. ನೀಡಿ ಸಂಜೆ ನೂರ ಹತ್ತು ರೂ. ಪಡೆಯುತ್ತಾರೆ.

ಇದು ವ್ಯಾಪಾರಸ್ಥರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯಾಗಿದ್ದು, ಅದನ್ನು ತಪ್ಪಿಸುವ ಸಲುವಾಗಿಯೇ ಈ ರೀತಿಯ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಲೇವಾದೇವಿ ವ್ಯವಹಾರಸ್ಥರು, ಗಿರವಿದಾರರು ಹಾಗೂ ಮೀಟರ್ ಬಡ್ಡಿ ದಂಧೆಯ ಮಂದಿ ಈ ಯೋಜನೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಹಾಗೂ ರಸ್ತೆ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯಲ್ಲೂ ಕಿರುಕುಳ ನೀಡದಂತೆ ಹೊಸ ವಿಧೇಯಕವೊಂದನ್ನು ತರಲಾಗುತ್ತಿದ್ದು , ಅದು ಮುಂದಿನ ಅಧಿವೇಶನದಲ್ಲಿ ಜಾರಿಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X