ಸಂಪರ್ಕ ಕೊಂಡಿ ನೆಲಮಂಗಲ ಏಕ್ಸ್ ಪ್ರೆಸ್ ವೇ ರೆಡಿ...

ವಿಪರೀತ ಟ್ರಾಫಿಕ್ ಜಾಮ್ ಪೆಡಂಭೂತವನ್ನು ತೊಲಗಿಸಿ ನೆಲಮಂಗಲಕ್ಕೆ 17 ನಿಮಿಷ ಮತ್ತು ತುಮಕೂರಿಗೆ 45 ನಿಮಿಷದಲ್ಲಿ ಹೋಗಬಹುದಾದ ಈ ಎಕ್ಷ್ ಪ್ರೆಸ್ ವೇ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಿರ್ಮಾಣಗೊಂಡಿದೆ. 2007 ಮೇ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖಾಸಗಿ ಸಹಭಾಗಿತ್ವದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದೇ ವರ್ಷ ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭಿಸಿದ ಪ್ರಾಧಿಕಾರ ಹೆಚ್ಚುಕಮ್ಮಿ ಒಂದು ವರ್ಷ ತಡವಾಗಿ ಕಾಮಗಾರಿ ಪೂರ್ಣಗೊಳಿಸಿದೆ.
ಹೆದ್ದಾರಿ ಪ್ರಾಧಿಕಾರದ ಮೂಲಗಳ ಪ್ರಕಾರ, ರಸ್ತೆ ನಿರ್ಮಾಣ, ಅಂಡರ್ ಪಾಸ್ ಸೇರಿದಂತೆ ಎಲ್ಲಾ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿದ್ದು ಸಣ್ಣ ಪುಟ್ಟ ಕಾಮಗಾರಿಗಳು 15 ದಿನಗಳಲ್ಲಿ ಪೂರ್ಣಗೊಂಡು ಇದೇ ತಿಂಗಳು ಸಂಚಾರಕ್ಕೆ ಮುಕ್ತವಾಗಲಿದೆ. ಸೋಡೆಕುಪ್ಪ ರಸ್ತೆ, ಅರಶಿನಕುಂಟೆ, ದಾಸನಾಪುರ, ಅಡಕಮಾರನಹಳ್ಳಿ, ಮಾದಾಪುರ ಮತ್ತು ಚಿಕ್ಕಬಿದರಕಲ್ಲು ಬಳಿ ಮಿನಿ ಫ್ಲೈ ಓವರ್ ಗಳು ನಿರ್ಮಾಣಗೊಂಡಿದೆ.
ಸುಮಾರು 776 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಕ್ಷ್ ಪ್ರೆಸ್ ವೇಗೆ 121 ಪಿಲ್ಲರ್ ಅಳವಡಿಸಲಾಗಿದೆ. ಆರು ವಾಹನ ಸಬ್ ವೇ ಗಳು ಸಿಗ್ನಲ್ ಫ್ರೀ ರಸ್ತೆಯಾಗಲಿದೆ. ಆಟೋರಿಕ್ಷಾ, ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನಗಳಿಗೆ ಪ್ರವೇಶ ನಿಷಿದ್ದ ಸಾಧ್ಯತೆಯಿದೆ. ಬೆಂಗಳೂರು ಕಡೆಯಿಂದ ಕೆನ್ನಮೆಟಲ್ ಕಂಪನಿ ಬಳಿ ಮತ್ತು ತುಮಕೂರು ಕಡೆಯಿಂದ ನೆಲಮಂಗಲದ ಬಳಿ ಶುಲ್ಕ ವಸೂಲಿಗೆ ಟೋಲ್ ಪ್ಲಾಜಾ ಸಜ್ಜಾಗಿದೆ.
ಮಡಿವಾಳ ಬೈಪಾಸ್ ಶೀಘ್ರ ರೆಡಿ : ಮಡಿವಾಳದ ಅಯ್ಯಪ್ಪ ದೇವಸ್ಥಾನದಿಂದ ಸೇಂಟ್ ಜಾನ್ ಆಸ್ಪತ್ರೆವರೆಗಿನ ಅಂಡರ್ ಪಾಸ್ ಕಾಮಗಾರಿಯೂ ಪೂರ್ಣಗೊಂಡಿದ್ದು, ಸೋಮವಾರದಿಂದ(ಆಗಸ್ಟ್ 2) ಪ್ರಾಯೋಗಿಕವಾಗಿ ಮಡಿವಾಳ ಅಂಡರ್ ಪಾಸ್ ನ್ನು ಸಾರ್ವಜನಿಕ ಸೇವೆಗೆ ನೀಡಲಾಗಿದೆ. ಇದರಿಂದ ಸೇಂಟ್ ಜಾನ್ ಆಸ್ಪತ್ರೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಧ್ಯ ವಾಹನ ದಟ್ಟಣೆ ಕೊಂಚ ಕಡಿಮೆಯಾಗಲಿದೆ.












Click it and Unblock the Notifications