ಶೌಚಾಲಯ ತೊಳೆದ ಅವಮಾನ ತಾಳದೆ ಬಾಲೆ ಆತ್ಮಹತ್ಯೆ

ದಿನಗೂಲಿ ಮಾಡುತ್ತಿದ್ದ ಮಹಿಳೆಯ 13 ವರ್ಷದ ಮಗಳು ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆಕೆ ಮಾಡಿದ ಅಪರಾಧವೆಂದರೆ, ಬಡ ಕುಟುಂಬದಲ್ಲಿ ಹುಟ್ಟಿದ್ದು, ಶುಲ್ಕ ಕಟ್ಟದಿದ್ದದ್ದು. ಜಿಲ್ಲಾ ಅಧಿಕಾರಿಯೊಬ್ಬರು ಲಕ್ಷ್ಮಿಯ ಶಾಲಾ ಶುಲ್ಕವನ್ನು ಮನ್ನಾ ಮಾಡಬೇಕೆಂದು ಪ್ರಿನ್ಸಿಪಾಲರನ್ನು ಕೇಳಿಕೊಂಡಿದ್ದು ಕೆರಳಿಸಿದೆ. ಇದರಿಂದ ಸಿಟ್ಟಿಗೆದ್ದ ಶಾಲೆಯ ಮಾಲಿಕ ರಾಜೇಶ್ ಪವಾರ್ ಲಕ್ಷ್ಮಿಯ ತಾಯಿಯನ್ನು ಸಾವಿರ ರು.ಗೆ ಶಾಲೆಯ ಶೌಚಾಯಲ ಸ್ವಚ್ಛಗೊಳಿಸುವ ಕೆಲಸ ಮಾಡಬೇಕೆಂದು ಕೇಳಿದ್ದಾನೆ. ಅದನ್ನು ಆಕೆ ನಿರಾಕರಿಸಿದ್ದಾಳೆ.
ಧೂರ್ತ ಪ್ರಿನ್ಸಿಪಾಲ ಆ ಕೆಲಸವನ್ನು ವಹಿಸಿದ್ದು, ನತದೃಷ್ಟ ಬಾಲಕಿಗೆ. ಶಾಲೆಯಲ್ಲಿ ಮುಂದುವರಿಯಬೇಕೆಂದರೆ ಎರಡರಷ್ಟು ಶುಲ್ಕ ಕಟ್ಟಬೇಕೆಂದು ದುಂಬಾಲು ಬಿದ್ದಿದ್ದಾನೆ. ಟಾಯ್ಲೆಟ್ ತೊಳೆಯುವುದು, ನಾಯಿ ಮಾಡಿದ ಹೊಲಸನ್ನು ತೆಗೆಯುವ ಕಾರ್ಯಗಳನ್ನು ಆಕೆ ಪ್ರಿನ್ಸಿಪಾಲ ಹೇಳಿದಂತೆ ಮತ್ತು ಯಾರಿಗೂ ತಿಳಿಯದಂತೆ ಮಾಡಿದ್ದಾಳೆ. ಇದು ಕೆಲ ಹುಡುಗರಿಗೆ ಗೊತ್ತಾಗಿ ಆಕೆಯನ್ನು ಛೇಡಿಸಿದ್ದಾರೆ. ತಮ್ಮ ಬೂಟುಗಳನ್ನು ಕೂಡ ಸ್ವಚ್ಛಗೊಳಿಸೆಂದು ಪೀಡಿಸಿದ್ದಾರೆ. ಇದರಿಂದ ರೋಸಿಹೋದ ಲಕ್ಷ್ಮಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಖಾಸಗಿ ಶಾಲೆಯಲ್ಲೇ ಈ ರೀತಿಯಾದರೆ, ಕರ್ನಾಟಕ ಸೇರಿದಂತೆ ದೇಶದ ಸರಕಾರಿ ಶಾಲೆಗಳಲ್ಲಿನ ಪರಿಸ್ಥಿತಿಗಳನ್ನು ಊಹಿಸಿಕೊಳ್ಳಿ. ಪ್ರಾರ್ಥನೆ ನಡೆಸುವ ಮುಂಚೆ ಅಂಗಳ ಗುಡಿಸುವುದು, ಬೋರ್ಡುಗಳನ್ನು ಕ್ಲೀನ್ ಮಾಡುವುದು, ಮೇಷ್ಟ್ರಿಗೆ ಬೇಕೆಂದಾಗೆಲ್ಲ ತರಕಾರಿ ತಂದುಕೊಡುವುದು, ಅಂಕ ಬೇಕೆಂದರೆ ಮನೆ ಚಾಕರಿ ಮಾಡುವುದು... ಇನ್ನೂ ಏನೇನು ಮಾಡಿಸಿಕೊಳ್ಳುತ್ತಾರೆ ಆ ದೇವನೇ ಬಲ್ಲ.
ಕರ್ನಾಟಕದ ಚನ್ನಪಟ್ಟಣದಲ್ಲಿ, ಬಡ ವಿದ್ಯಾರ್ಥಿಗಳಿಂದ ಈ ಎಲ್ಲ ಕೆಲಸ ಮಾಡಿಸಿಕೊಳ್ಳುವುದು ಹೋಗಲಿ, ಶೌಚಾಯಲದಲ್ಲೇ ಪಾಠ ನಡೆಸುವ ಭೂಪರೂ ಇದ್ದಾರೆ. ಅವರ ಕೊರಳಿಗೆ ಗಂಟೆ ಕಟ್ಟಲು ನಮ್ಮ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮಕ್ಕಳು ಮೂಗು ಮುಚ್ಚಿಕೊಂಡು ಪಾಠ ಕೇಳುತ್ತವೆ. ಹೋಗಲಿ, ಆ ಮೇಷ್ಟ್ರಾದರೂ ಹೇಗೆ ಪಾಠ ಮಾಡುತ್ತಾನೋ?
ನಮ್ಮ ಶಿಕ್ಷಣದ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಬಡ ಪ್ರತಿಭೆಗಳಿಗೆ ಪುರಸ್ಕಾರ ದೊರೆಯುವುದಿಲ್ಲ. ದುರಹಂಕಾರಿ, ದುರಾಡಳಿತ ನಡೆಸುವ ಶಾಲಾ ಅಧಿಕಾರಿಗಳನ್ನು ಕೇಳುವವರಿಲ್ಲ. ಶಿಕ್ಷಣದ ಹಕ್ಕಿನ ಪ್ರಕಾರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹತ್ತಿರವಿರುವ ಶಾಲೆಯಲ್ಲಿ ಪ್ರವೇಶ ದೊರಕಿಸಿಕೊಡಲೇಬೇಕು. ಈ ಘಟನೆಗೆ ಕೇಂದ್ರ ಸಚಿವ ಕಪಿಲ್ ಸಿಬಾಲ್ ಏನು ಹೇಳುತ್ತಾರೆ?












Click it and Unblock the Notifications