ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಗೆ ಬನ್ನಿ ನಮ್ಮ ಆತಿಥ್ಯ ಸ್ವೀಕರಿಸಿ: ಶ್ರೀರಾಮುಲು

By * ರೋಹಿಣಿ, ಬಳ್ಳಾರಿ
|
Google Oneindia Kannada News

Reddy Brothers open invitaion to congress men
ಬಳ್ಳಾರಿ, ಜು.11:ಕಾಂಗ್ರೆಸ್ಸಿಗರು ಬಳ್ಳಾರಿಯಲ್ಲಿ ಸಮಾವೇಶ ಮಾಡಿದ್ರೆ ನಾನು 'ಅತಿಥಿ ಸತ್ಕಾರ' ಮಾಡುತ್ತೇನೆ ಎಂದು ಸಚಿವ ಜಿ. ಜನಾರ್ದನರೆಡ್ಡಿ ಅವರು ಹೇಳಿದರೆ, ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ಸಿಗರ ಸಮಾವೇಶಕ್ಕೆ 'ಶಾಮಿಯಾನ, ಊಟ, ತಿಂಡಿ, ನೀರಿನ ವ್ಯವಸ್ಥೆ ಮಾಡುತ್ತೇನೆ' ಎಂದು ಘೋಷಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಮುಖಂಡರು, ನಮ್ಮ ಶಾಸಕರು ವಿರೋಧ ಪಕ್ಷದವರನ್ನು 'ಬಳ್ಳಾರಿಗೆ ಬನ್ನಿ, ಒಂದು ಕೈ ನೋಡಿಕೊಳ್ಳುತ್ತೇವೆ' ಎಂದಿಲ್ಲ. 'ಬಳ್ಳಾರಿಗೆ ಬನ್ನಿ, ಇಲ್ಲಿಯ ಅಭಿವೃದ್ಧಿ ನೋಡಿ. ಸೋನಿಯಾಗಾಂಧಿ ಸ್ಪರ್ಧಿಸಿದಾಗಲೂ ಆಗದಷ್ಟು ಅಭಿವೃದ್ಧಿ ಆಗಿದೆ. ನೋಡಿ' ಎಂದು ಕರೆದಿದ್ದೇವೆ. ಇದನ್ನೇ ವಿರೋಧ ಪಕ್ಷದವರು ತಿರುಚಿ ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರೇ ಬಿಜೆಪಿ ಶಾಸಕರನ್ನು ಪ್ರಚೋದಿಸಿದ್ದಾರೆ ಎಂದರು.

ಐದು ದಶಕಗಳ ಕಾಲ ಆಳಿದ ಕಾಂಗ್ರೆಸ್ಸಿಗರ ಕೊಲೆ ಮತ್ತು ಗೂಂಡಾ ಸಂಸ್ಕೃತಿಯಿಂದ ಬೇಸತ್ತ ಜನರೇ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬಳ್ಳಾರಿಯವರು ರೌಡಿಗಳು, ಕೀಳು ಸಂಸ್ಕೃತಿ ಉಳ್ಳವರು ಎಂಬ ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಯತ್ನಿಸುತ್ತಿದ್ದಾರೆ. ಇಡೀ ಜಿಲ್ಲೆಯ ಜನತೆಯನ್ನು ಕಾಂಗ್ರೆಸ್ಸಿಗರು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಜಿ. ಜನಾರ್ದನರೆಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಿದ್ಧರಾಮಯ್ಯ ತೋಳ್ತಟ್ಟಿದ್ದನ್ನು ಖಂಡಿಸಲು ಬಿಜೆಪಿ ಶಾಸಕರು ಮುಂದಾದಾಗ ಕಾಂಗ್ರೆಸ್ಸಿಗರು ನಮ್ಮ ಮೇಲೆ ಎರಗಿದ್ದಾರೆ. 3 ದಶಕಗಳ ರಾಜಕೀಯ ಅನುಭವ ಹೊಂದಿರುವ ಸಿದ್ಧರಾಮಯ್ಯ 27 ವರ್ಷದ ಯುವ ಶಾಸಕನಿಗೆ ಸೆಡ್ಡು ಹೊಡೆದು ಪ್ರಚೋದಿಸಿದಾಗ ಸುರೇಶ್‌ಬಾಬು ಸಿಟ್ಟಾಗಿದ್ದು ವಯೋ ಸಹಜ ಎಂದು ಅವರು ಹೇಳಿದರು.

ಸದನದಲ್ಲಿ ಗಣಿಗದ್ದಲ:
ಅಧಿವೇಶನ ಪ್ರಾರಂಭ ಆದ ದಿನದಿಂದಲೂ ಸದನದಲ್ಲಿ ಬರೀ ಗಣಿ ಗದ್ದಲ ನಡೆದಿದೆ. ಮುಖ್ಯಮಂತ್ರಿಗಳ ಉತ್ತರಕ್ಕೆ ವಿರೋಧ ಪಕ್ಷಗಳು ಸಮಾಧಾನ ಆಗುತ್ತಿಲ್ಲ. ಇನ್ನು ಸಚಿವ ಜಿ. ಜನಾರ್ದನರೆಡ್ಡಿ ಸಮಾಧಾನದಿಂದ ಉತ್ತರಿಸಲೂ ಅವಕಾಶ ನೀಡುತ್ತಿಲ್ಲ.

ಗಣಿ ವಿವಾದ ಕುರಿತು ವಿರೋಧ ಪಕ್ಷಗಳೇ ಸತ್ಯವನ್ನು ಮರೆ ಮಾಚುತ್ತಿವೆ. ವಿರೋಧ ಪಕ್ಷಗಳು ನಮ್ಮನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಿ ಪಕ್ಷ ಮತ್ತು ನಮ್ಮನ್ನು ವಧೆ ಮಾಡಲು ವಿಫಲ ಯತ್ನ ಮಾಡುತ್ತಿವೆ. ನೆರೆ ಸಂತ್ರಸ್ತರ ಹಣ ದುರುಪಯೋಗದ ಸತ್ಯವನ್ನು ಮರೆ ಮಾಚಿ ಜನರ ಯೋಚನಾ ದಿಕ್ಕು ಬದಲಾಯಿಸಲು ಕಾಂಗ್ರೆಸ್ ಸದನದಲ್ಲಿ ಗದ್ದಲ ಎಬ್ಬಿಸುವ ತಂತ್ರ ಅನುಸರಿಸುತ್ತಿದೆ.

ಬಳ್ಳಾರಿಯ ಸ್ಟೈಲ್ ಇಲ್ಲಿ ನಡೆಯುವುದಿಲ್ಲ. ಬಳ್ಳಾರಿಯವರನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದೇ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್, ಸಿದ್ಧರಾಮಯ್ಯ ಇತರರು. ನಾವಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಾವು ತಪ್ಪು ಮಾಡಿದ್ದಲ್ಲಿ ಜೈಲಿಗೆ ಹೋಗಲು ಕೂಡ ಸಿದ್ಧ ಎಂದು ಬಿ. ಶ್ರೀರಾಮುಲು ಹೇಳಿದರು.

ಜಿ. ಜನಾರ್ದನರೆಡ್ಡಿ ಅವರು ಮಾತನಾಡಿ, ಸದನದಲ್ಲಿ ಶುಕ್ರವಾರ ನಡೆದ ಸಂಪೂರ್ಣ ಘಟನಾವಳಿಗಳ ಸತ್ಯಾಸತ್ಯತೆಯನ್ನು ಮರೆ ಮಾಚದೇ ಮಾಧ್ಯಮಗಳು ಜನರಿಗೆ ತಿಳಿಸಬೇಕು. ಜಿಲ್ಲೆಯ ಜನತೆಯ ಬಗ್ಗೆ ಕಾಂಗ್ರೆಸ್ಸಿಗರು ಕೀಳಾಗಿ ಮಾತನಾಡುತ್ತಿರುವುದನ್ನು ಜನತೆಗೆ ತಿಳಿಸಬೇಕು.

ಕೊಲೆ - ಗೂಂಡಾ ಸಂಸ್ಕೃತಿ ಕಾಂಗ್ರೆಸ್ ಮತ್ತು ಅದರ ನಾಯಕ ಎಂ. ದಿವಾಕರಬಾಬುದ್ದು. ನಮ್ಮದಲ್ಲ. ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸುವವರಿಗೆ ನಾನು 'ಅತಿಥಿ ಸತ್ಕಾರ' ಮಾಡುವೆ ಎಂದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಎನ್. ಗುರುಲಿಂಗನಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X