ಹಿಂದೂಗಳನ್ನು ಕೊಟ್ಟಿಗೆಯಲ್ಲಿ ಕೂಡಿಹಾಕಿದ ಪಾಕಿಗಳು

ಕರಾಚಿ ನಗರದ ಮೆಮನ್ ಗೋತಾ ಪ್ರದೇಶದಲ್ಲಿರುವ ಮಸೀದಿ ಬಳಿ ಹಿಂದೂ ಬಾಲಕನೊಬ್ಬ ನೀರು ಕುಡಿದ ತಪ್ಪಿಗೆ ಆ ಪ್ರದೇಶದಲ್ಲಿದ್ದ ಸುಮಾರು 60 ಕುಟುಂಬವನ್ನು ಅಮಾನವೀಯವಾಗಿ ಎಳೆದು ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಿಕೆ 'ದಿ ನ್ಯೂಸ್' ವರದಿ ಮಾಡಿದೆ.
ಸ್ಥಳೀಯ ಪ್ರಭಾವಿ ಬುಡಕಟ್ಟು ಜನಾಂಗದ ನಾಯಕ ಈ ಎಲ್ಲಾ ಕುಟುಂಬದವರನ್ನು ದನದ ಕೊಟ್ಟಿಗೆಯಲ್ಲಿಯೇ ನೆಲೆಸುವಂತೆ ಬೆದರಿಕೆ ಹಾಕಿದ್ದಾನೆ. ಮಸೀದಿ ಬಳಿ ನನ್ನ ಮಗ ನೀರು ಕುಡಿಯುತ್ತಿದ್ದನ್ನು ನೋಡಿದ ಸ್ಥಳೀಯ ಬುಡಕಟ್ಟು ಜನಾಂಗದವರು ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು 150 ಜನ ಸೇರಿ ಇಲ್ಲಿ ವಾಸವಾಗಿರುವ ಹಿಂದೂ ಕುಟುಂಬದವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ 7 ಜನರನ್ನು ಜಿನ್ನಾ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹುಡುಗನ ತಂದೆ ದಿನೇಶ್ ಸ್ಥಳೀಯ ಪತ್ರಿಕೆಗೆ ತನ್ನ ನೋವು ತೋಡಿ ಕೊಂಡಿದ್ದಾನೆ.
ಈ ಪ್ರದೇಶದ ಮತ್ತೊಂದು ಭಾಗದಲ್ಲಿರುವ ಸುಮಾರು 400 ಕುಟುಂಬಗಳಿಗೂ ಜೀವ ಬೆದರಿಕೆ ಇದೆ. ದನದ ಕೊಟ್ಟಿಗೆಯಲ್ಲಿ ನೆಲೆಸುವಂತೆ ನಮಗೆ ಆಜ್ಞಾಪಿಸಿದ್ದಾರೆ. ಮಹಿಳೆಯರಿಗಂತೂ ರಕ್ಷಣೆಯೇ ಇಲ್ಲ. ಎಲ್ಲಿ ಜೀವಕ್ಕೆ ಅಪಾಯ ಮಾಡುತ್ತಾರೋ ಎಂದು ಮನೆಯಿಂದ ಹೊರ ಬರಲು ಭಯವಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಘಟನೆ ಸ್ಥಳೀಯ ಪೊಲೀಸರಿಗೆ ತಿಳಿದಿದೆ. ಆದರೆ ಅವರು ಇದುವರೆಗೆ ನಮ್ಮ ರಕ್ಷಣೆಗೆ ಬಂದಿಲ್ಲ ಎಂದು ನೊಂದ ಹೀರಾ ಎನ್ನುವ ವ್ಯಕ್ತಿ ಹೇಳಿಕೆ ನೀಡಿದ್ದಾನೆ.
ಇಲ್ಲಿ ನಡೆಯುತ್ತಿರುವ ಘಟನೆಗೆ ಮತ್ತು ಹಿಂದೂಗಳ ಫಿರ್ಯಾದಿಗೆ ಸ್ಪಂದಿಸಿರುವ ಅಲ್ಪಸಂಖ್ಯಾತ ಖಾತೆ ಸಚಿವ ಮೋಹನ್ ಲಾಲ್ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಪೊಲೀಸರಿಗೆ ರಕ್ಷಣೆ ನೀಡುವಂತೆ ಆದೇಶ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications