ನಿರೀಕ್ಷೆ ಹುಟ್ಟಿಸಿ ಟುಸ್ ಆದ ಸ್ಟಾರ್ ಆಟಗಾರರು

Lionel messi
ಫೀಫಾ ವಿಶ್ವಕಪ್ 2010 ನಿರ್ಣಾಯಕ ಹಂತದತ್ತ ಸಾಗಿರುವ ಸಂದರ್ಭದಲ್ಲಿ ಈ ಬಾರಿ ನಿರೀಕ್ಷೆ ಹುಟ್ಟಿಸಿ, ಏನು ಸಾಧಿಸದೇ ಹೋದ ಪ್ರಮುಖ ಆಟಗಾರರ ವಿಶ್ವಕಪ್ ಯಾತ್ರೆಯ ವಿವರ ಇಲ್ಲಿದೆ.

ರೂನಿ, ಕಾಕಾ, ಹೆನ್ರಿ, ಟೊರೆಸ್ , ಮೆಸ್ಸಿ,ಈ ಎಲ್ಲಾ ವಿಶ್ವಕಪ್ ನಲ್ಲಿ ಮಿಂಚುತ್ತಾರೆಂದು ಅಭಿಮಾನಿಗಳು ಕಾದಿದ್ದೆ ಆಯ್ತು. ಅತ್ಯಂತ ನಿರಾಸೆ ಮೂಡಿಸಿದ್ದೆ ಅಲ್ಲದೆ, ವೈಯಕ್ತಿಕವಾಗಿ ಹಾಗೂ ತಂಡದ ಗೌರವವನ್ನು ಹಾಳುಗೆಡವಿದರು. ಅಫ್ ಕೋರ್ಸ್, ಫುಟ್ಬಾಲ್ ವೈಯಕ್ತಿಕ ಕ್ರೀಡೆಯಲ್ಲ, ಆದರೆ, ಸಮರ್ಥ ಆಟಗಾರರ ಪರಸ್ಪರ ಹೊಂದಾಣಿಕೆಯಿಂದ ಮಾತ್ರ ಯಶ ಸಾಧಿಸಲು ಸಾಧ್ಯ.

ಆದರೆ, ಮೇಲ್ಕಂಡ ಆಟಗಾರ ವೈಫಲ್ಯಕ್ಕೆ ದೊಡ್ಡ ಕಾರಣ, ಇತರೆ ಆಟಗಾರರಿಗೆ ಪಾಸ್ ನೀಡುತ್ತಾ ಮುಂದುವರೆಯದೆ ತನ್ನಷ್ಟಕ್ಕೆ ತಾನು ಸ್ವಾರ್ಥಿಯಾಗಿ ಓಡಿದ್ದು, ಕೆಲವೊಮ್ಮೆ ಕೋಚ್ ನ ಗೇಮ್ ಪ್ಲಾನ್ ಗೆ ಬಲಿಯಗಿದ್ದು,ಅವರ ಹಾಗೂ ತಂಡದ ವೈಫಲ್ಯಕ್ಕೆ ಮೂಲ ಕಾರಣವಾಯಿತು.

ಕಾಕಾ: ಬ್ರೆಜಿಲಿನ ಮುಂಪಡೆ ಆಟಗಾರ. ರಿಯಲ್ ಮ್ಯಾಡ್ರಿಡ್ ತಂಡದ ಆಧಾರ ಸ್ತಂಭ. ಗಳಿಸಿದ ಗೋಲುಗಳ ಸಂಖ್ಯೆ ಸೊನ್ನೆ. 10 ನೇ ನಂಬರ್ ನ ಜರ್ಸಿ ಧರಿಸಿ ಆಡುವ ಕಾಕಾ ಎರಡು ಬಾರಿ ಹಳದಿ ಕಾರ್ಡ್ ಪಡೆದು ಒಂದು ಪಂದ್ಯದಿಂದ ವಂಚಿತನಾದ. ಸುಮಾರು 8 ಶಾಟ್ ಗಳು ಗೋಲಿನ ಕಡೆ ಹೊಡೆದಿದ್ದರೂ 3 ಬಾರಿ ಮಾತ್ರ ಗುರಿ ಮುಟ್ಟುವ ಹಂತ ತಲುಪಿದವು.

ಆದರೆ, ಒಟ್ಟು 163 ಪಾಸ್ ಗಳನ್ನು ನೀಡಿರುವ ಕಾಕಾ ಒಮ್ಮೆ ಗೋಲು ಹೊಡೆಯಲು ಉತ್ತಮ ಪಾಸ್ ಸಹ ನೀಡಿದ್ದ. ಎದುರಾಳಿ ಆಟಗಾರರು ಕಾಕಾನನ್ನು ಟಾರ್ಗೆಟ್ ಮಾಡಿ ನಾಟಕವಾಡುತ್ತಾ ಫೌಲ್ ಬಲೆಗೆ ಬೀಳಿಸಿದ್ದನ್ನು ಕೂಡಾ ವಿಶ್ವಕಪ್ ನಲ್ಲಿ ನೋಡಲಾಯಿತು.

ವೇಯ್ನ್ ರೂನಿ: ಮ್ಯಾಂಚೆಸ್ಟರ್ ಯುನೆಟೆಡ್ ಪರ ಆಡುವ ಇಂಗ್ಲೆಂಡ್ ನ ಮುಂಪಡೆ ಆಟಗಾರ. ನಾಲ್ಕು ಪಂದ್ಯದಲ್ಲಿ 342ಕ್ಕೂ ಅಧಿಕ ನಿಮಿಷದ ಆಟ ಆಡಿದರೂ ರೂನಿ ಕಾಲಿಂದ ಒಂದೂ ಗೋಲು ಗಳಿಸಲು ಆಗಲಿಲ್ಲ. ಜರ್ಮನಿ ವಿರುದ್ಧದ ಪಂದ್ಯದಲ್ಲಂತೂ ತೀರ ಬಳಲಿದ ಅಜ್ಜನಂತೆ ಹೆಜ್ಜೆ ಹಾಕುತ್ತಿದ್ದದ್ದು ಕಂಡರೆ, ಇಂಗ್ಲೆಂಡ್ ನ ಭವಿಷ್ಯದ ಆಟಗಾರ ಎಂದು ಪಂಡಿತರು, ಮಾಧ್ಯಮಗಳು ಬಣ್ಣಿಸಿದ್ದು ಅತಿಯಾಯಿತು ಎನಿಸುತ್ತದೆ.

ಸುಮಾರು 13 ಬಾರಿ ಗೋಲಿನತ್ತ ಚೆಂಡು ಒದ್ದರೂ 6 ಬಾರಿ ಮಾತ್ರ ಗುರಿ ಮುಟ್ಟುವ ಆಸೆ ಹುಟ್ಟಿಸಿತ್ತು. ನಾಲ್ಕು ಬಾರಿ ಫೌಲ್ ಮಾಡಿದ ರೂನಿಗೆ ಇನ್ನೂ 25ರ ಹರೆಯ. 2003ರಲ್ಲಿ ಅಂತಾರಾಷ್ಟ್ರೀಯ ಮೈದಾನಕ್ಕೆ ಇಳಿದ ರೂನಿ ಈವರೆಗೂ 64 ಪಂದ್ಯಗಳಲ್ಲಿ 25 ಗೋಲುಗಳನ್ನು ಗಳಿಸಿದ್ದಾರೆ.

ಕ್ರಿಸ್ಟಿಯಾನೋ ರೊನೊಲ್ಡೊ:
ಪೋರ್ಚುಗಲ್ ನ ಮುಂಪಡೆ ಆಟಗಾರ. 2003ರಲ್ಲಿ ಅಂತಾರಾಷ್ಟ್ರೀಯ ಮೈದಾನಕ್ಕೆ ಇಳಿದು, 76 ಪಂದ್ಯಗಳಲ್ಲಿ 23 ಗೋಲುಗಳನ್ನು ಗಳಿಸಿದ್ದಾರೆ. ರಿಯಲ್ ಮ್ಯಾಡ್ರಿಡ್ ನಲ್ಲಿ ಕಾಕಾ ಜೊತೆ ಆಡುತ್ತಿದ್ದಾನೆ. ಆಡಿದ ನಾಲ್ಕು ಪಂದ್ಯಗಳ 360 ನಿಮಿಷಗಳಲ್ಲಿ ಗಳಿಸಿದ್ದು ಒಂದೇ ಗೋಲು.ಸುಮಾರು 21 ಬಾರಿ ಗೋಲಿನತ್ತ ಚೆಂಡು ಒದ್ದರೂ 9 ಬಾರಿ ಮಾತ್ರ ಗುರಿ ತಲುಪುವ ಸಮೀಪಕ್ಕೆ ಬಂದೀತು.

ಏಳನೇ ನಂಬರ್ ಜರ್ಸಿ ಧರಿಸುವ ರೊನೊಲ್ಡೊ ಒಮ್ಮೆ ಮಾತ್ರ ಫೌಲ್ ಮಾಡಿದ್ದು, 25 ಹರೆಯದಲ್ಲೇ ತನ್ನ ಪೀಳಿಗೆಯ ಆಟಗಾರರಲ್ಲೇ ಅತಿ ಹೆಚ್ಚು ಹಣ ಹಾಗೂ ಜನಪ್ರಿಯತೆ ಗಳಿಸಿದವ. ಆದರೆ, ಈ ಬಾರಿ ಉತ್ತಮವಾಗಿ ಆಡುವ ಭರವಸೆ ಮೂಡಿಸಿದರೂ ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ವಿಫಲನಾಗಿ ಛಾಯಾಗ್ರಾಹಕನತ್ತ ಕ್ಯಾಕರಿಸಿ ಉಗಿದು ಅನಗತ್ಯ ವಿವಾದಕ್ಕೆ ಸಿಕ್ಕಿಕೊಂಡ.

ಥಿಯೆರಿ ಹೆನ್ರಿ: ಬಾರ್ಸಿಲೋನಾ ಪರ ಆಡುವ ಫ್ರಾನ್ಸ್ ನ ಮುಂಪಡೆಯ ಹಿರಿಯ ಆಟಗಾರ ಈ ವರೆಗೂ 123 ಪಂದ್ಯಗಳಲ್ಲಿ 51 ಗೋಲುಗಳನ್ನು ಗಳಿಸಿದ್ದಾನೆ. ಆದರೆ, ಈ ವಿಶ್ವಕಪ್ ನಲ್ಲಿ ಅನುಭವಕ್ಕೆ ತಕ್ಕ ಆಟವಾಡದೆ, ತಂಡದ ಸೋಲಿಗೆ ಕಾರಣನಾದ. ಆಡಿದ್ದು ಎರಡೇ ಪಂದ್ಯ ಆದರೆ ಗಮನಿಸಬೇಕಾದ್ದು ಹೆನ್ರಿ ಮೈದಾನದಲ್ಲಿದ್ದದ್ದು 53 ನಿಮಿಷಗಳು ಮಾತ್ರ. ಹೆನ್ರಿಯನ್ನು ಮೈದಾನಕ್ಕೆ ತಡವಾಗಿ ಇಳಿಸುವ ಫ್ರಾನ್ಸ್ ನ ತಂತ್ರ ಸಂಪೂರ್ಣ ವೈಫಲ್ಯ ಕಂಡಿತು.

ಆಡಿದ ಪಂದ್ಯಗಳಲ್ಲಿ ಒಂದೂ ಗೋಲುಗಳಿಸಿದ 30 ರ ಹರೆಯದ ಹೆನ್ರಿ ಮುಂದಿನ ವಿಶ್ವಕಪ್ ಆಡುವುದು ಅನುಮಾನ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತು ವರ್ಷಗಳ ಕಾಲ ಆಡಿದ ಅನುಭವವಿದೆ. ಆದರೆ, ಹೆನ್ರಿಯ ಅನುಭವ, ಸಾಮರ್ಥ್ಯ ಉಪಯೋಗಕ್ಕೆ ಬರಲಿಲ್ಲ. ಫ್ರಾನ್ಸ್ ಲೀಗ್ ಹಂತದಲ್ಲೇ ಸೋತು ಮನೆಗೆ ಹಿಂತಿರುಗಬೇಕಾಯಿತು.

ಫರ್ನಾಂಡೋ ಟೊರೆಸ್: ಲಿವರ್ ಪೂಲ್ ಪರ 9 ನೇ ನಂ .ಜರ್ಸಿ ಧರಿಸಿ ಆಡುವ ಮುಂಪಡೆ ಆಟಗಾರ ಫರ್ನಾಂಡೋ ಟೊರೆಸ್ ಗೆ ತನ್ನ ಶಕ್ತಿ ಸಾಮರ್ಥ್ಯ ತೋರಲು ಇನ್ನೂ ಅವಕಾಶವಿದೆ. ಸೆಮಿಫೈನಲ್ ತಲುಪಿರುವ ಸ್ಪೇನ್ ತಂಡವನ್ನು ಫೈನಲ್ ವರೆಗೂ ಕೊಂಡೊಯ್ಯುವ ಶಕ್ತಿ ಟೊರೆಸ್ ಗಿದೆ.

2003 ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಮೈದಾನಕ್ಕೆ ಕಾಲಿರಿಸಿದ 24 ರ ಹರೆಯದ ಟೊರೆಸ್ ಇದುವರೆವಿಗೂ 77 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 24 ಗೋಲು ಗಳಿಸಿದ್ದಾನೆ. ಆದರೆ, ಆಡಿರುವ ನಾಲ್ಕು ಪಂದ್ಯಗಳಲ್ಲಿ 212 ನಿಮಿಷಗಳ ಮೈದಾನದಲ್ಲಿದ್ದರೂ ಒಂದೂ ಗೋಲು ಗಳಿಸಿಲ್ಲ. ಇದೇ ಫಾರ್ಮ ಮುಂದುವರೆದರೆ ಬದಲಿ ಆಟಗಾರರ ಜೊತೆ ಬೆಂಚ್ ಹಂಚಿಕೊಂಡು ಕೂರಬೇಕಾದ ಕರ್ಮ ಟೊರೆಸ್ ಗೆ ಒದಗಿಬರಲಿದೆ.

ಲಿಯೊನೆಲ್ ಮೆಸ್ಸಿ: ಬಾರ್ಸಿಲೊನಾ ಪರ ಆಡುವ ಅರ್ಜೆಂಟೀನಾದ ಮುಂಪಡೆ ಆಟಗಾರ. ತನ್ನ ಪೀಳಿಗೆ ಆಟಗಾರರಲ್ಲೇ ಅತ್ಯಂತ ಚುರುಕು ಓಟ ಹಾಗೂ ಕೌಶಲ್ಯವುಳ್ಳ ಮೆಸ್ಸಿ, ಮರಡೋನಾ ಪಡೆಯ ನೆಚ್ಚಿನ ಆಟಗಾರ. 2005 ರಲ್ಲಿ ಅಂತಾರಾಷ್ಟ್ರೀಯ ಕಣಕ್ಕಿಳಿದ ಮೆಸ್ಸಿ 49 ಪಂದ್ಯಗಳಲ್ಲಿ 13 ಗೋಲು ಗಳಿಸಿದ್ದಾರೆ.

23 ರ ಹರೆಯದ ಮೆಸ್ಸಿ ಇನ್ನೂ ಒಂದೇ ಒಂದು ಗೋಲು ಗಳಿಸದಿದ್ದರೂ ಆಡಿರುವ ನಾಲ್ಕು ಪಂದ್ಯಗಳ 360 ನಿಮಿಷಗಳಲ್ಲಿ 226 ಪಾಸ್ ಗಳನ್ನು ನೀಡಿದ್ದಾನೆ. ಈ ಮೂಲಕ ತಂಡದ ಆಟಗಾರ ಎನಿಸಿದರೂ ವೈಯಕ್ತಿಕವಾಗಿ ಗೋಲು ಗಳಿಕೆಯಲ್ಲಿ ಹಿಂದುಳಿದಿರುವುದು ಏಕೆ ಎಂಬುದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. 23 ಶಾಟ್ ಗಳಲ್ಲಿ 13 ಗೋಲ್ ಟಾರ್ಗೆಟ್ ಮುಟ್ಟುವಂತಿತ್ತು ಎಂದರೆ ಆಕ್ರಮಣಕಾರಿ ಮನೋಭವವನ್ನು ಊಹಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+