ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಹೆಗ್ಡೆಯನ್ನು ಶ್ಲಾಘಿಸಿದ ಯಡಿಯೂರಪ್ಪ

By Prasad
|
Google Oneindia Kannada News

BS Yeddyurappa
ಬೆಂಗಳೂರು, ಜು. 2 : ವಿದೇಶಗಳಿಗೆ ಕಬ್ಬಿಣದ ಅದಿರು ರಫ್ತು ಮಾಡುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರಿಗೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ರಾಜೀನಾಮೆ ಕುರಿತಂತೆ ವಿಧಾನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ಅವರು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸಲೇಬೇಕು. ಈ ಕುರಿತಂತೆ ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಿ ಪ್ರಧಾನಿಗೆ ಮನವಿ ಸಲ್ಲಿಸಲು ಸಿದ್ಧ ಎಂದು ಅವರು ಶುಕ್ರವಾರ ಸದನದಲ್ಲಿ ಹೇಳಿದರು.

ಅದಿರಿನ ಅಕ್ರಮ ರಫ್ತನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಸ್ಟೀಲ್ ಉದ್ಯಮದಲ್ಲಿ ಲಭ್ಯವಿರುವ ಅದಿರಿನ ಸದ್ಬಳಕೆಯಾಗಬೇಕು ಎಂದು ಯಡಿಯೂರಪ್ಪ ಒತ್ತಿ ಹೇಳಿದರು.

ರಾಜ್ಯ ಸರಕಾರ ಭ್ರಷ್ಟಾಚಾರ ತಡೆಯುವಲ್ಲಿ ಅಸಹಕಾರ ತೋರಿದ್ದರಿಂದಲೇ ಲೋಕಾಯುಕ್ತರು ರಾಜೀನಾಮೆ ನೀಡಬೇಕಾಯಿತು ಎಂಬ ವಿಷಯ ಸದನದಲ್ಲಿ ಬಿಸಿಬಿಸಿ ಚರ್ಚೆಗೆ ದಾರಿಮಾಡಿಕೊಟ್ಟಿದೆ. ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿವೆ.

ಸಂತೋಷ್ ಹೆಗ್ಡೆ ಅವರು ರಾಜೀನಾಮೆ ಕೊಟ್ಟಾಗಿನಿಂದ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದ ಯಡಿಯೂರಪ್ಪ ಅವರು, ಇಂದು ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಲೋಕಾಯುಕ್ತ ಕೈಗೊಂಡಿರುವ ಎಲ್ಲ ಕ್ರಮಗಳನ್ನು ಶ್ಲಾಘಿಸಿದರು. ಲೋಕಾಯುಕ್ತ ಮುಂದುವರಿಯಲು ಕೇಳುವುದಾಗಿ ಹೇಳಿದರು. ಸಂತೋಷ್ ಹೆಗ್ಡೆ ಅವರು ಆಗಸ್ಟ್ 31ರಂದು ಲೋಕಾಯುಕ್ತ ಪೀಠ ತ್ಯಜಿಸಲಿದ್ದಾರೆ.

ಸಡಿಲವಾಗದ ಹೆಗ್ಡೆ ಪಟ್ಟು : ಈ ನಡುವೆ, ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜೀನಾಮೆ ಹಿಂದೆ ಪಡೆಯಬೇಕು ಮತ್ತು ತಮ್ಮ ಸ್ಥಾನದಲ್ಲಿ ಮುಂದುವರಿಯಬೇಕು ಎಂಬ ಎಲ್ಲ ಮನವೊಲಿಕೆ ಯತ್ನಗಳಿಗೆ ಹೆಗ್ಡೆಯವರು ತಣ್ಣೀರು ಎರಚಿದ್ದಾರೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿಲ್ಲಿ ಯಡಿಯೂರಪ್ಪನವರು ನೀಡಿರುವ ಹೇಳಿಕೆಯನ್ನು ಸ್ವಾಗತಿಸಿರುವ ಅವರು, ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲಾರೆ ಎಂದು ಪಟ್ಟುಹಿಡಿದ್ದಾರೆ.

ಆದರೆ, ಮುಂದೆ ಕೂಡ ಅಗತ್ಯ ಬಿದ್ದರೆ ಸಮಾನ ಮನಸ್ಕರೆಲ್ಲ ಸೇರಿ ಭ್ರಷ್ಟಾಚಾರದ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಯುದ್ಧ ಸಾರುವುದಾಗಿ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಸಂತೋಷ್ ಹೆಗ್ಡೆಯವರು ರಾಜೀನಾಮೆಯನ್ನು ಮರುಪರಿಶೀಲಿಸಬೇಕು ಎಂದು ರಾಜ್ಯದ ಎಲ್ಲೆಡೆಯಿಂದ ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ತನಿಖೆಗೆ ಹೈಕೋರ್ಟ್ ಆದೇಶ : ಕಾರವಾರದ ಬೇಲೆಕೇರಿ ಬಂದರಿನಲ್ಲಿ ನಾಪತ್ತೆಯಾಗಿದ್ದ ಕೋಟಿಗಟ್ಟಲೆ ಬೆಲೆಯ ಅದಿರಿನ ಪತ್ತೆಗೆ ತನಿಖೆ ನಡೆಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶಿಸಿದೆ. ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X