ನನ್ನ ಕಾದಂಬರಿಗಳಿಗೆ ಶುದ್ಧ ವಿಮರ್ಶೆ ಬಂದಿಲ್ಲ : ಬೈರಪ್ಪ

ಹೊಸ ಕಾದಂಬರಿ ಕವಲು ಮಾರುಕಟ್ಟೆಯಲ್ಲಿ ಬಿಸಿಬಿಸಿದೋಸೆಯಂತೆ ಖರ್ಚಾಗುತ್ತಿವೆ. ಕಳೆದ ಜೂನ್ 28 ರಂದು ಬಿಡುಗಡೆಗೊಂಡಿರುವ ಕವಲು ಕಾದಂಬರಿ ಮೂರೇ ದಿನದಲ್ಲಿ ಮೂರು ಮುದ್ರಣ ಕಂಡಿದ್ದು, ಜುಲೈ 2 ಕ್ಕೆ ನಾಲ್ಕನೇ ಮುದ್ರಣ ಮಾರುಕಟ್ಟೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿಯೇ ಖುಷಿಯಲ್ಲಿರುವ ಭೈರಪ್ಪ ಪತ್ರಿಕೆಯೊಂದಕ್ಕೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಕಾದಂಬರಿಗಳಿಗೆ ಉತ್ತಮ ವಿಮರ್ಶೆಗಳು ಬಂದಿಲ್ಲ. ಹೊಗಳುವವರು, ತೆಗಳುವವರು ಯಾರೂ ಕೂಡಾ ಸರಿಯಾಗಿ ವಿಮರ್ಶೆ ಮಾಡಲಿಲ್ಲ. ನನ್ನ ತಾಂತ್ರಿಕ ಕೌಶಲವನ್ನು ಗುರುತಿಸಲಿಲ್ಲ ಎಂದರು. ಭಾರತದಲ್ಲಿ ಈಗ ಮನುಶಾಸ್ತ್ರ ಚಾಲ್ತಿಯಲ್ಲಿಲ್ಲ. ಆದರೆ, ಮುಸ್ಲಿಂ ಧರ್ಮ ಗ್ರಂಥ ಮಾತ್ರ ಈಗಲೂ ಹಿಂಸೆಯನ್ನು ಪ್ರಚೋದಿಸುತ್ತದೆ. ಅದನ್ನು ಬದಲಾಯಿಸಿಕೊಳ್ಳಲು ಅವರು ಬಯಸುವುದಿಲ್ಲ. ಅದನ್ನು ಬದಲಾಯಿಸಿ ಎಂದು ಹೇಳುವ ನಾಯಕರೂ ಇಲ್ಲ. ಬದಲಾಯಿಸಲು ನಮ್ಮ ರಾಜಕೀಯ ನಾಯಕರು ಬಿಡುವುದಿಲ್ಲ ಎಂದು ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ಭಾರತೀಯ ಕುಟುಂಬದಲ್ಲಿ ಆಗುತ್ತಿರುವ ಬದಲಾವಣೆಗಳು, ತಲ್ಲಣಗಳೇ ಕವಲು ಕಾದಂಬರಿಯ ಮುಖ್ಯ ಆಶಯ. ಕುಟುಂಬ ವ್ಯವಸ್ಥೆಯ ಬಗ್ಗೆ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಂದಿವೆ. ನಾನು ಹೊಸ ದೃಷ್ಟಿಕೋನದಿಂದ ನೋಡಿದ್ದೇನೆ. ವರದಕ್ಷಿಣೆ ಕಾನೂನು, ಕೌಟುಂಬಿಕ ಹಿಂಸೆ ನಿಯಂತ್ರಣ ಕಾನೂನುಗಳು ಹೇಗೆ ದುರ್ಬಳಿಕೆಯಾಗುತ್ತಿವೆ ಎಂದು ವಿವರಿಸಿದ್ದೇನೆ. ಇದರಿಂದ ಉಂಟಾಗುವ ಸಾಮಾಜಿಕ, ನೈತಿಕ ಪರಿಣಾಮಗಳು, ಮುಂದಿನ ಪೀಳಿಗೆಯ ಮೇಲೆ ಆಗುವ ಪರಿಣಾಮಗಳು ಬಗ್ಗೆ ಕಾದಂಬರಿಯಲ್ಲಿ ಚರ್ಚಿಸಿದ್ದೇನೆ ಎಂದು ಭೈರಪ್ಪ ಹೇಳಿದರು.












Click it and Unblock the Notifications