ದುಬಾರೆಯಲ್ಲಿ ಚಿಕಿತ್ಸೆಗಾಗಿ ಕಾದಿದ್ದಾನೆ ಲಕ್ಷ್ಮಣ
ಕುಶಾಲನಗರ, ಜೂ.29 : ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿರುವ ದುಬಾರೆ ಸಾಕಾನೆ ಶಿಬಿರದ ಲಕ್ಷ್ಮಣ ಎಂಬ ಸಾಕಾನೆ ಸೂಕ್ತ ಚಿಕಿತ್ಸೆ ಇಲ್ಲದೆ ಸಾವು-ಬದುಕಿ ನಡುವೆ ಹೋರಾಡುತ್ತಿದೆ.
ಪ್ರವಾಸಿ ಕೇಂದ್ರವಾದ ದುಬಾರೆ ಸಾಕಾನೆ ಶಿಬಿರಕ್ಕೆ ದಿನಂಪ್ರತಿ ಬರುವ ಪ್ರವಾಸಿಗರನ್ನು ಸಫಾರಿ ಮೂಲಕ ಹೊತ್ತು ಅರಣ್ಯ ದರ್ಶನ ಮಾಡಿಸುತ್ತಿದ್ದ ಲಕ್ಷ್ಮಣ ಇದೀಗ ತನ್ನ ಮುಂದಿನ ಕಾಲಿನ ಸ್ವಾಧೀನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ.
ಲಕ್ಷ್ಮಣನನ್ನು ಕೆಲವು ದಿನಗಳ ಹಿಂದೆ ಕಾಡಿಗೆ ಮೇಯಲು ಬಿಟ್ಟಿದ್ದ ಸಂದರ್ಭ ಕಾಡಾನೆಯೊಂದು ಇದರ ಮೇಲೆ ದಾಳಿ ಮಾಡಿದ್ದರಿಂದಾಗಿ ಬಲ ಕಾಲಿಗೆ ತೀವ್ರ ಪೆಟ್ಟು ಬಿದ್ದು ಮೂಳೆ ಮುರಿದು ಹೋಗಿದ್ದು, ಇದೀಗ ನಡೆದಾಡದಂತಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಮೂರ್ಖಲ್ ವನ್ಯಜೀವಿ ವಿಭಾಗದಿಂದ ಸಫಾರಿಗೊಸ್ಕರ ದುಬಾರೆ ಸಾಕಾನೆ ಶಿಬಿರಕ್ಕೆ ತರಲಾಗಿತ್ತು. ಇದೀಗ 48 ವರ್ಷ ಪ್ರಾಯದ ಲಕ್ಷ್ಮಣ ಸೂಕ್ತ ಚಿಕಿತ್ಸೆಯಿಲ್ಲದೆ ದಿನದಿಂದ ದಿನಕ್ಕೆ ಸೊರಗಿ ಹೋಗುತ್ತಿದ್ದಾನೆ. ಗಾಯಗೊಂಡಿರುವ ಲಕ್ಷ್ಮಣನಿಗೆ ಹುಣಸೂರು ವಿಭಾಗದ ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಶ್ರೀನಿವಾಸ್ ಚಿಕಿತ್ಸೆ ನೀಡಿದ್ದಾರೆ. ಆದರೂ ಪ್ರಯೋಜನ ಕಾಣುತ್ತಿಲ್ಲ.
ಕಳೆದ ಐದು ದಿನಗಳ ಹಿಂದೆ ಬೆಂಗಳೂರು ಮತ್ತು ಬೀದರ್‌ನ ಪಶುವೈದ್ಯ ಹಾಗೂ ಮೀನುಗಾರಿಕಾ ವಿಜ್ಞಾನಿಗಳ ವಿ.ವಿ.ಉಪಕುಲಪತಿ ಸುರೇಶ್ ಎಸ್.ಹೊನ್ನಪ್ಪ ನೇತೃತ್ವದಲ್ಲಿ ತಜ್ಞ ವೈದ್ಯ ತಂಡ ದುಬಾರೆಗೆ ಭೇಟಿ ನೀಡಿ ಚಿಕಿತ್ಸೆ ನೀಡಲು ಪರಿಶೀಲಿಸಿ ಹೋಗಿದೆಯಾದರೂ ಇನ್ನೂ ಕೂಡ ಈ ಆನೆಗೆ ಚಿಕಿತ್ಸೆಯ ಭಾಗ್ಯ ಒದಗಿಬಂದಿಲ್ಲ. ಸಂಬಂಧಿಸಿದವರು ಗಮನಹರಿಸುವರೇ ಕಾದು ನೋಡಬೇಕಾಗಿದೆ.












Click it and Unblock the Notifications