ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ : ರಾಮಚಂದ್ರೇಗೌಡ!

ಬಿಜೆಪಿ ಸಾಧನಾ ಸಮಾವೇಶಕ್ಕೆ ಎರಡು ದಿನ ಮೊದಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಹೆಗ್ಡೆ ಜೊತೆಗಿನ ಬಾಂಧವ್ಯ ಚೆನ್ನಾಗೇ ಇದೆ, ಅವರ ಎಲ್ಲ ಬೇಡಿಕೆ ಈಡೇರಿಸಿದ್ದೇವೆ ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದ ನಂತರ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಅವರು ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ ಎಂದು ಹೇಳಿ ದಂಗುಬಡಿಸಿದ್ದಾರೆ.
"ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ. ವೇರ್ ಈಸ್ ಕರಪ್ಶನ್? ಭ್ರಷ್ಟಾಚಾರ ಇದೆ ಅಂತ ಕಂಪ್ಲೇಂಟ್ ಬರಲಿ, ವಿ ವಿಲ್ ಟೇಕ್ ಆಕ್ಷನ್. ಪ್ರಜಾಪ್ರಭುತ್ವದಲ್ಲಿ ಸರಕಾರವೇ ಸುಪ್ರೀಂ. ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಹೇಗೆ ಸಾಧ್ಯ? ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಸಾಧ್ಯವೇ ಇಲ್ಲ" ಎಂದು ರಾಮಚಂದ್ರೇಗೌಡ ಅವರು ಎಂದಿನಂತೆ ಕನ್ನಡ, ಇಂಗ್ಲಿಷ್ ಮಿಶ್ರಿತ ತಮ್ಮದೇ ಧಾಟಿಯಲ್ಲಿ ಗುಡುಗಿದ್ದಾರೆ.
ಸಂತೋಷ್ ಹೆಗ್ಡೆ ಪ್ರತಿವಾದ : ಸರಕಾರದ ನಿರ್ಲಕ್ಷ್ಯತನ ಮತ್ತು ಕಾರ್ಯವೈಖರಿಯಿಂದ ಬೇಸತ್ತು ಹದಿನಾಲ್ಕು ತಿಂಗಳು ಮೊದಲೇ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಬಿಸಾಕಿರುವ ಸಂತೋಷ್ ಹೆಗ್ಡೆ ಸರಕಾರದ ಅನಿಸಿಕೆಗಳ ವಿರುದ್ಧ ಪ್ರತಿವಾದ ಮಂಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಸರಕಾರಕ್ಕೆ ನಾನಿರುವುದು ಬೇಕಾಗಿರಲಿಲ್ಲ. ನನ್ನ ರಾಜೀನಾಮೆ ಬೇಕಿತ್ತು ಎಂಬುದು ಸ್ಪಷ್ಟ. ಬಿಜೆಪಿ ಸಾಧನಾ ಸಮಾವೇಶ ಕೆಟ್ಟುಹೋಗಲೆಂದೇ ನಾನು ರಾಜೀನಾಮೆ ನೀಡಿದೆ ಅಂತ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಹೇಳುತ್ತಿದ್ದಾರೆ. ಇದು ಸುಳ್ಳು ಎಂದು ಹೇಳಿದ್ದಾರೆ.
ನನ್ನ ರಾಜೀನಾಮೆಯ ಹಿಂದೆ ಪಿತೂರಿಯಿದೆ, ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿರುವ ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸರಕಾರ ಮುಂದೆ ಇಟ್ಟಿದ್ದು ಮೂರೇ ಮೂರು ಬೇಡಿಕೆಗಳು. ಸರಕಾರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications