ಬಡವರ ಮನೆ ಬುದ್ದಿವಂತ ಹುಡುಗಿಯ ಸಾವು

ವಿದ್ಯಾರ್ಥಿನಿಯ ಹೆಸರು ಯಶಸ್ವಿನಿ. ಹದಿನಾರು ವರ್ಷ. ಇತ್ತೀಚೆಗೆ ಜರುಗಿದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿನಿಯೆಂಬ ಹೆಸರು ಗಳಿಸಿದ್ದಳು. ಕಾಲೇಜಿಗೆ ಸೇರಿ ವ್ಯಾಸಂಗ ಮುಂದುವರೆಸಬೇಕೇಂಬ ಉತ್ಕಟ ಅಪೇಕ್ಷೆ ಇಟ್ಟುಕೊಂಡಿದ್ದಳು. ತನ್ನ ಬಹುತೇಕ ಸ್ನೇಹಿತೆಯರು ಪ್ರವೇಶ ಪಡೆಯುತ್ತಿರುವ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿಗೆ ತಾನೂ ಸೇರಬೇಕೆಂದು ಆಸೆಪಟ್ಟಿದ್ದಳು.
ಆದರೆ, ಆ ಕಾಲೇಜು ದುಬಾರಿ. ಅಷ್ಟೊಂದು ಕಾಲೇಜು ಫೀಸು, ಪುಸ್ತಕಗಳು ಮುಂತಾದ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕೆ ಅವರ ಬಡ ತಂದೆ ತಾಯಿಗೆ ಸಾಧ್ಯವಿರಲಿಲ್ಲ. ತಂದೆಗೆ ಸಣ್ಣ ಹೊಟೇಲಿನಲ್ಲಿ ಅಡುಗೆ ಭಟ್ಟರ ಕೆಲಸ. ತಾಯಿ ಗಾರ್ಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗ. ಆದ್ದರಿಂದ ಕೋರಮಂಗಲದ ಖಾಸಗಿ ಕಾಲೇಜು ಆಸೆ ಬಿಟ್ಟು ಆಡುಗೋಡಿಯ ಸರಕಾರಿ ಕಾಲೇಜಿಗೆ ಪ್ರವೇಶ ಪಡೆಯಬೇಕೆಂದು ಮಗಳಿಗೆ ತಾಕೀತು ಮಾಡಿದ್ದರು.
ಇಷ್ಟು ಹೇಳಿದ್ದೇ ಅಪರಾಧವಾಯಿತು. ಈ ವಿಚಾರದಲ್ಲಿ ತಾಯಿ ಮಗಳಿಗೆ ಮಂಗಳವಾರ ಚೂರು ಮಾತುಕತೆ ನಡೆಯಿತು. ಜ್ಯೋತಿ ಕಾಲೇಜಿಗೆ ಸೇರುವುದಾಗಿ ಯಶಸ್ವಿನಿ ಹಠ ಹಿಡಿದಳು. ಕುಪಿತಳಾದ ತಾಯಿ 'ತಡೀ ಅಪ್ಪ ಬರಲಿ ಹೇಳ್ತೀನಿ' ಎಂದು ಬೆದರಿಕೆ ಹಾಕಿದಳು. ಆನಂತರದಲ್ಲಿ ಆಗಬಾರದ್ದು ಆಗಿಹೋಯಿತು. ಯಶಸ್ವಿನಿ ಮೆಟಾಸಿಡ್ ಕುಡಿದಳು. ಹೇಗೋ ನೆರೆಹೊರೆಯವರಿಗೆ, ಮನೆಮಂದಿಗೆ ಗೊತ್ತಾಗಿ ಮಂಗಳವಾರ ಮಧ್ಯಾನ್ಹ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಹುಡುಗಿ ಮತ್ತೆ ಆಸ್ಪತ್ರೆಯಿಂದ ಮನೆಗೆ ಬರಲಿಲ್ಲ.
ಇರುವ ಒಬ್ಬಳೇ ಮಗಳನ್ನು ಕಳೆದುಕೊಂಡ ತಂದೆ ಮಂಜುನಾಥ್ ಅವರ ಶೋಕ ಹೇಳತೀರದು. ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳಿಗಾಗಿಯೇ ನಾನು ನನ್ನ ಹೆಂಡತಿ ದುಡಿಯುತ್ತಿದ್ದೆವು. ನನ್ನ ಕಣ್ಮುಂದೆ ಅವಳು ಹೆಣವಾಗಿದ್ದು ನನ್ನ ದುರದೃಷ್ಟದ ಪರಮಾವಧಿ ಎಂದು ಕಣ್ಣೀರು ಹಾಕಿದರು.












Click it and Unblock the Notifications