ರಾಜ್ಯಸಭೆಗೆ ಕಿಂಗ್ ಆಫ್ ಗುಡ್ ಟೈಮ್ಸ್

ಬಿಜೆಪಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಮತ್ತು ಆಯನೂರು ಮಂಜುನಾಥ ಕೂಡ ಜಯ ಸಾಧಿಸಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಆಸ್ಕರ್ ಫರ್ನಾಂಡಿಸ್ ಜಯಶಾಲಿಯಾಗಿದ್ದಾರೆ.
ಮಲ್ಯ ಅವರಿಗೆ 27 ಸದಸ್ಯರ ಜೆಡಿಎಸ್ ಬೆಂಬಲ ಸೂಚಿಸಿದ್ದರಿಂದ ಎರಡನೇ ಪ್ರಾಶಸ್ತ್ಯದ ಮತಗಳು ಅಗತ್ಯವಿತ್ತು. ಆದರೆ, ರಾಷ್ಟ್ರೀಯ ನಾಯಕರ ಅಣತಿಯಂತೆ ಬಿಜೆಪಿಯ ಎರಡನೇ ಪ್ರಾಶಸ್ತ್ಯದ ಮತಗಳು ವಿಜಯ್ ಮಲ್ಯರಿಗೆ ಬಿದ್ದಿದ್ದರಿಂದ ವಿಜಯ ಸುಗಮವಾಯಿತು.
"ಬಿಜೆಪಿ ಎಲ್ಲಾ ಶಾಸಕರು ಎರಡನೇ ಪ್ರಾಶಸ್ತ್ಯಮತಗಳನ್ನು ಸ್ವತಂತ್ರ ಅಭ್ಯರ್ಥಿ ವಿಜಯ ಮಲ್ಯ ಅವರನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಅನ್ನು ಬಗ್ಗು ಬಡಿಯಬೇಕು ಎಂದು ಪಕ್ಷದ ಹಿರಿಯ ನಾಯಕರಿಂದ ಆದೇಶ ಬಂದಿತ್ತು. ಅದರಂತೆ ನಾವು ನಡೆದುಕೊಂಡಿದ್ದೇವೆ" ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಒಟ್ಟು 221 ಮಂದಿ ಮತದಾನ ಮಾಡಿದರು. ಕಾಂಗ್ರೆಸ್ಸಿನ 73, ಬಿಜೆಪಿಯ 115 ಹಾಗೂ ಜೆಡಿಎಸ್ ನ 27 ಮಂದಿ ಮತದಾನ ಮಾಡಿದರು. ಅನಾರೋಗ್ಯ ಪೀಡಿತರಾದ ಸಚಿವ ಹರತಾಳು ಹಾಲಪ್ಪ ಅವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಕಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಮೂರ್ತಿ ಕೂಡಾ ಅನಾರೋಗ್ಯದ ಕಾರಣದಿಂದ ಮತದಾನದಿಂದ ದೂರ ಉಳಿದರು.
ಒಟ್ಟು ನಾಲ್ಕು ಸ್ಥಾನಕ್ಕೆ ನಡೆದ ಚುನಾವಣೆಯ ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ವಿಜಯ್ ಮಲ್ಯ, ಬಿಜೆಪಿಯಿಂದ ಆಯನೂರು ಮಂಜುನಾಥ ಮತ್ತು ವೆಂಕಯ್ಯ ನಾಯ್ಡು ಹಾಗೂ ಕಾಂಗ್ರೆಸ್ ನಿಂದ ಆಸ್ಕರ್ ಫರ್ನಾಂಡಿಸ್ ಮತ್ತು ಟಿವಿ ಮಾರುತಿ ರಾಜ್ಯಸಭೆಗೆ ಪ್ರವೇಶ ಬಯಸಿ ಚುನಾವಣೆಗೆ ನಿಂತಿದ್ದರು.
ಒಟ್ಟು 116 ಸದಸ್ಯ ಬಲ ಹಾಗೂ 6 ಮಂದಿ ಪಕ್ಷೇತರರನ್ನು ಹೊಂದಿರುವ ಬಿಜೆಪಿ ತನ್ನ ಅಭ್ಯರ್ಥಿಗಳಾದ ವೆಂಕಯ್ಯನಾಯ್ಡು ಹಾಗೂ ಆಯನೂರು ಮಂಜುನಾಥ ಅವರ ಗೆಲ್ಲಿಸಿ ನಂತರ ಮಲ್ಯರಿಗೆ ಎರಡನೇ ಪ್ರಾಶಸ್ತ್ಯ ಓಟುಗಳನ್ನು ಹಾಕುವಂತೆ ಬಿಜೆಪಿ ಶಾಸಕರಿಗೆ ಪಕ್ಷ ವಿಪ್ ಜಾರಿ ಮಾಡಿತ್ತು.












Click it and Unblock the Notifications