ಸಂಜನಾ ಸಾವಿಗೆ ಮುನಿರತ್ನ ಕಾರಣ

ಪೂರ್ವ ವಿಭಾಗದ ಜಂಟಿ ಆಯುಕ್ತ, ಬ್ಯಾಟರಾಯನಪುರ ವ್ಯಾಪ್ತಿಯ ಇಂಜಿನಿಯರ್ ಹಾಗೂ ಬಿಬಿಎಂಪಿ ವಿರುದ್ಧ ಸಂಜನಾ ಸಿಂಗ್ ಅವರ ತಂದೆ ಅಶೋಕ್ ಕುಮಾರ್ ಕೇಸು ದಾಖಲಿಸಿದ್ದಾರೆ. ಲೋಕಾಯುಕ್ತ ಸಂತೋಷ್ ಹೆಗಡೆ ಅವರನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ರಾಜ್ಯ ಮಾನವ ಹಕ್ಕುಗಳ ಆಯೋಗ ಮುಂದಾಗಿದೆ ಎಂದು ಜಸ್ಟೀಸ್ ಎಸ್ ಆರ್ ನಾಯಕ್ ಹೇಳಿದರು.
ನಿರ್ಮಾಪಕ ಕಮ್ ಕಾರ್ಪೋರೇಟರ್ ಮುನಿರತ್ನ ಅವರು ಈ ಪ್ರಕರಣ ಪ್ರಮುಖ ಆರೋಪಿಯಾಗಿದ್ದಾರೆ. ಸರಿಯಾದ ಅಡಿಪಾಯವಿಲ್ಲದೆ ಬರಿ ಹೆಚ್ಚು ಮರಳು ಉಪಯೋಗಿಸಿ ಗೋಡೆ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯೇ ಗೋಡೆ ಕುಸಿತಕ್ಕೆ ಕಾರಣ. ಮುನಿರತ್ನ ಹಾಗೂ ಇಂಜಿನಿಯರ್ ಹುಮೇಶ್ ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಪಾಲಿಕೆಯ ಮುಖ್ಯ ಇಂಜಿನಿಯರ್ ಚಿಕ್ಕರಾಯಪ್ಪ ಹೇಳುತ್ತಾರೆ.
ಆರೋಪ ನಿರಾಧಾರ, ಒಂದು ಕೋಟಿ ಪರಿಹಾರ ನೀಡಲು ಸಿದ್ಧ ಎಂದು ಮುನಿರತ್ನ ಘೋಷಿಸಿದ್ದರು. ಉಪೇಂದ್ರ ಅಭಿನಯದ ರಕ್ತಕಣ್ಣೀರು ಚಿತ್ರವನ್ನು ಮುನಿರತ್ನ ನಿರ್ಮಿಸಿದ್ದರು. ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಕಾರ್ಪೋರೇಟರ್ ಆಗಿರುವ ಮುನಿರತ್ನ ಅವರು ಕುಸಿತಗೊಂಡ ಗೋಡೆ ನಿರ್ಮಿಸಿದ ಕಂಟ್ರಾಕ್ಟರ್ ಕೂಡಾ ಆಗಿದ್ದಾರೆ.
ಜೂನ್ 1ರಂದು ಸಂಜೆ ಸುರಿದ ಭಾರಿ ಮಳೆಗೆ ಬಳ್ಳಾರಿ ರಸ್ತೆಯ ಸಿಬಿಐ ಜಂಕ್ಷನ್ ಬಳಿಯ ಪಶುವೈದ್ಯ ಕಾಲೇಜ್ ಆವರಣದ 9 ಅಡಿ ಎತ್ತರದ ಗೋಡೆ ಕುಸಿದು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆರ್.ಟಿ. ನಗರದ ಸಂಜನಾಸಿಂಗ್ (17) ಮೃತಪಟ್ಟಿದ್ದರು.












Click it and Unblock the Notifications