ವಿವಾದದ ನಡುವೆಯೇ ಗಣಿ ಸರ್ವೇ ಮುಕ್ತಾಯ

ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಕರ್ನಾಟಕ - ಆಂಧ್ರದ ಗಡಿ ಮತ್ತು ಆಂಧ್ರದ ಗಡಿ ಭಾಗದಲ್ಲಿ ಆರು ಗಣಿಗಳ ಗಡಿಗಳನ್ನು ಗುರುತಿಸಲು ಮೇ 22ರಂದು ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ತಂಡ ಬಳ್ಳಾರಿಗೆ ಆಗಮಿಸಿತ್ತು. ಅಂತರಗಂಗಮ್ಮಕೊಂಡ ಪ್ರದೇಶದಲ್ಲಿ (ಎಜಿಕೆ) ಸರ್ವೇ ಕಾರ್ಯ ನಡೆಸಿದ ಈ ತಂಡ ನಿಗದಿತ ಸ್ಥಳದಲ್ಲಿ ಗಣಿಗಾರಿಕೆಯನ್ನು ಪ್ರಸ್ತತ ನಡೆಸಕೂಡದು ಎಂದು ರೆಡ್ಡಿಗಳಿಗೆ ಫರ್ಮಾನು ನೀಡಿದೆ.
ಕರ್ನಾಟಕ - ಆಂಧ್ರದ ಅಧಿಕಾರಿಗಳು ಒಟ್ಟಾಗಿ ಸರ್ವೇ ಕಾರ್ಯದಲ್ಲಿ ಪಾಲ್ಗೊಂಡಿದ್ದರೂ ಕೂಡ, ಕರ್ನಾಟಕ ಭಾಗದಲ್ಲಿ ಸರ್ವೇ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಧಿಕಾರಿಗಳ ವಲಯಲದಲ್ಲಿ ತೀವ್ರ ಅಸಮಾಧಾನಗಳು ಕೇಳಿಬರುತ್ತಿವೆ. ಗಣಿ ಗುತ್ತಿಗೆದಾರ ಟಪಾಲ್ ಗಣೇಶ್ ರಾಜ್ಯಪಾಲರು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳನ್ನು ಭೇಟಿ ಮಾಡಿ ಲಿಖಿತ ದೂರುಗಳ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಸರ್ವೇ ಆಫ್ ಇಂಡಿಯಾದ ಅಧಿಕಾರಿ ಎ.ಕೆ. ಪಾದ ಅವರು 1975ರ ಟೋಪಾ ಶೀಟ್ ಪ್ರಕಾರವೇ ಸರ್ವೇ ನಡೆಯುತ್ತಿದ್ದು ಕರ್ನಾಟಕ - ಆಂಧ್ರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ತಮ್ಮ ಸರ್ವೇಯನ್ನು ಒಪ್ಪಿಕೊಳ್ಳಬೇಕು' ಎಂದು ಅನಧಿಕೃತವಾಗಿ ಫ್ಯಾಕ್ಸ್ ಸಂದೇಶವನ್ನು ರವಾನೆ ಮಾಡಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಸರ್ವೇ ಆಫ್ ಇಂಡಿಯಾದ ಪ್ರಸ್ತುತ ಸರ್ವೇಗೆ ನಮ್ಮ ಸಹಮತ ಇಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಲಿಖಿತವಾಗಿ ಸ್ಪಷ್ಟಪಡಿಸಿದ್ದಾರೆ.
ಸರ್ವೇ ಕಾರ್ಯ ಅಪೂರ್ಣವಾಗಿದೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ನಾವುಗಳು ಹೋಗುತ್ತಿದ್ದೇವೆ. ಶೀಘ್ರದಲ್ಲೇ ಮೊತ್ತೊಮ್ಮೆ ಬಂದು ಸರ್ವೇ ಕಾರ್ಯ ಮುಂದುವರೆಸುತ್ತೇವೆ. ಈವರೆಗಿನ ಸರ್ವೇ ಕುರಿತು ಮೇಲಧಿಕಾರಿಗಳಿಗೆ ಲಿಖಿತ ವರದಿ ಸಲ್ಲಿಸುತ್ತೇವೆ. ಅವರ ನಿರ್ದೇಶನಗಳ ಪ್ರಕಾರ ಮುಂದಿನ ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ (ಓಎಂಸಿ) ಮಂಗಳವಾರ ಬೆಳಗ್ಗೆಯಿಂದಲೇ ಗಣಿ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಕಬ್ಬಿಣದ ಅದಿರನ್ನು ಸಾಗಿಸಲು ಆಂಧ್ರ ಅರಣ್ಯ - ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳು ಪರವಾನಿಗೆಗಳನ್ನು ನೀಡಬೇಕಾಗಿದೆ.












Click it and Unblock the Notifications