ಹಾಲಪ್ಪನೋರೇ ಅತ್ಯಾಚಾರ ಮಾಡಿದ್ದು ಖರೇನಾ?

ಹಾಲಪ್ಪ ಸಾತ್ವಿಕರಂತೇ ? ಪ್ರಾಮಾಣಿಕ ಕಾರ್ಯಕರ್ತರಂತೇ? ಉತ್ತಮ ಕೆಲಸಗಾರ ಎಂಬ ಪ್ರಮಾಣಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಹೀಗಿದ್ದಾಗಲೂ ರಾಜೀನಾಮೆ ಕೊಡುವ ಅವಶ್ಯಕತೆ ಇತ್ತೇನ್ರಿ ? ನಿಮ್ಮ ಬಳಿ ಅಧಿಕಾರ ಇತ್ತು, ಆಯಾಕಟ್ಟಿನಲ್ಲಿ ನಿಮ್ಮವರೇ ಆದ ಖಾಕಿ ಪಡೆ ಇದೆ. ಕೈ ಮಾಡಿದ್ರೆ ಕರಿಕೋಟುದಾರಿಗಳು ಕೂಡಾ ನಿಮ್ಮ ಬೆಂಬಲಕ್ಕೆ ನಿಂತು ಕೇಸ್ ನಿಂದ ಖುಲಾಸೆಗೊಳಿಸುತ್ತಿದ್ದರು.
ಒಂದು ಪತ್ರಿಕೆ ನಿಮ್ಮ ವಿರುದ್ಧ ವರದಿ ಮಾಡಿದ್ದರೇನಂತೆ ಇನ್ನೊಂದು ಪತ್ರಿಕೆ ಮೂಲಕ ಅಪ್ಪಟ ಚಿನ್ನ, ರನ್ನ, ಅಪರಂಜಿ ಎಂದೆಲ್ಲಾ ಬರೆಸಬಹುದಿತ್ತು. ಖಜಾನೆಯಲ್ಲಿ ಕೋಟಿ ಕೋಟಿ ರೊಕ್ಕ. ಹೆದರಿಸಲು, ಬೆದರಿಸಲು ಛೇಲಾಗಳ ದೊಡ್ಡ ಪಡೆಯೇ ಇದೆ. ವಿರೋಧಿಗಳನ್ನು ಹುಟ್ಟಡಗಿಸುವ ಎಲ್ಲ ತಾಕತ್ತು ನಿಮ್ಮ ಬಳಿ ಇತ್ತು. ಇಷ್ಟೆಲ್ಲಾ ಇದ್ದಾಗಲೂ ಕೂಡ ರಾಜೀನಾಮೆ ಛೇ...ಛೇ. ಆದರೆ, ಇಂತಹ ದೊಡ್ಡ ಹುದ್ದೆಯಲ್ಲಿರುವ ನಿಮ್ಮಂತವರು, ಅಫ್ಟರಾಲ್ ರೇಪ್ ಮಾಡಿದ ಆರೋಪಕ್ಕೆ ಒಳಗಾಗಿ ರಾಜೀನಾಮೆ ನೀಡುವುದೇ ?
ರಾಜೀನಾಮೆ ನೀಡಿ ಶಿವಮೊಗ್ಗ ಜಿಲ್ಲೆಗೆ ಅವಮಾನ ಮಾಡಿದ್ದಿರಲ್ರೀ. ಶಿವಮೊಗ್ಗದ ರಾಜಕಾರಣಿಗಳ ಇತಿಹಾಸ ನೋಡಿದ್ರೆ ಇದೇನು ಮಹಾ ತಪ್ಪು ಬಿಡಿ ಅಂತ ಜನರಿಗೆ ಅನಿಸುತ್ತೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆಎಚ್ ಪಟೇಲ್ರು ಹೇಗೆ ರಾಜ್ಯಭಾರ ಮಾಡಿದ್ರು ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ನೀವು ಮನಸ್ಸು ಮಾಡಿದ್ದರೇ, ಸಿಎಂ ನಿಮ್ಮ ಮಾತು ತೆಗೆದು ಹಾಕುತ್ತಿರಲಿಲ್ಲ. ಎದುರಿಗೆ ಬಂದವರನ್ನು ಚಂಡು ಮುರಿಯಬಹುದಿತ್ತಲ್ಲ. ಅದನ್ನೆಲ್ಲಾ ಬಿಟ್ಟು ಏಕಾಏಕಿ ರಾಜೀನಾಮೆ ಸಲ್ಲಿಸಿದ್ದರಲ್ಲ. ಏಕೆ ಅನ್ನೋದನ್ನು ಮೊದಲು ಸ್ಪಷ್ಟಪಡಿಸಿ ಹರತಾಳ್ ಹಾಲಪ್ಪನವರೇ...
ಮಂತ್ರಿಯಾಗಿದ್ದುಕೊಂಡು ಮನೆಗೆ ಊಟಕ್ಕೆ ಕರೆದ ಗಳೆಯ ಪತ್ನಿಯ ಜೊತೆಗೆ ಚಕ್ಕಂದ ಇಳಿಯುವ ಮೂಲಕ ಪೈಶಾಚಿಕೆ ಪ್ರದರ್ಶಿಸಿರುವ ನಿಮ್ಮ ಕೃತ್ಯ ಸರಿಯೇ ? ಕಳೆದ ವರ್ಷ ಅಕ್ಟೋಬರ್ ನಲ್ಲಿಯೇ ಶಿವಮೊಗ್ಗದ ಮನೆಯೊಂದರನ್ನು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅದನ್ನು ಇಲ್ಲಿಯವರೆಗೆ ನಿಮ್ಮ ಶಕ್ತಿ ಬಳಸಿ ಮುಚ್ಚುಕೊಂಡು ಬಂದಿದ್ದೀರಿ. ಸ್ನೇಹಿತ ಮನೆಗೆ ನೂರಾರು ಸಲ ಫೋನ್ ಕರೆ ಗಳನ್ನು ಮಾಡಿಸಿ ಬೆದರಿಕೆ ಹಾಕಿಸಿದ್ದೀರಿ. ಆದರೆ ಅಧಿಕಾರದಲ್ಲಿರುವ ವ್ಯಕ್ತಿಗಳಿಗೆ ವೈರಿಗಳು ಸಂಖ್ಯೆಯೂ ಅಧಿಕ ಎನ್ನುವುದು ಗೊತ್ತಿರದ ದಡ್ಡರೇನೂ ನೀವಲ್ಲ.
ಹಾಲಪ್ಪ ಮಾಡಿದ್ದಾರೆ ಎನ್ನಲಾದ ತಪ್ಪು ಅತ್ಯಂತ ಗುರುತರ, ಗಂಭೀರ. ರಾಜ್ಯದ ಮಾನ ಕಳೆಯುವಂತ ಕೆಲಸವನ್ನು ಈ ರಾಜಕಾರಣಿ ಮಾಡಿದ್ದಾರೆ. ಆದರೆ, ಬಿಜೆಪಿ ಮಾತ್ರ ಹಾಲಪ್ಪ ಅವರನ್ನು ಉಳಿಸುವ ಕಾರ್ಯದಲ್ಲಿ ನಿರತವಾಗಿದೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಕರೆಯುವ ಸಿಎಂ, ಹಾಲಪ್ಪ ಹಾಲಿನಂತ ಮನುಷ್ಯ. ಅವರು ಶೀಘ್ರದಲ್ಲಿ ಆರೋಪದಿಂದ ಮುಕ್ತಿ ಹೊಂದುತ್ತಾರೆ ಎಂದು ಹೇಳುತ್ತಾರೆ.
ಹಾಲಪ್ಪ ಪ್ರಕರಣ ಮುಗಿದ ಅಧ್ಯಾಯ ಎನ್ನುತ್ತಾರೆ ವಕ್ತಾರ ಧನಂಜಯ ಕುಮಾರ್. ಆರೋಪ ಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ಹಾಲಪ್ಪ ಶ್ರೀರಾಮನಂತೆ ಪರಿಶುದ್ಧ. ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಿದ್ದಾರೆ ಎನ್ನುತ್ತಾರೆ. ಇವರ ಬಾಯಿಯಲ್ಲಿ ಪ್ರಕರಣ ದಾಖಲಿಸುವುದಾಗಲಿ, ಸತ್ಯ ಹೊರಬೇಕು ಎನ್ನುವುದಾಗಲಿ, ತನಿಖೆ ನಡೆಯಬೇಕು ಎನ್ನುವ ಮಾತೇ ಇಲ್ಲ. ಹಾಗಾದರೆ, ಸಚಿವರಾದವರು ಕಂಡಕಂಡ ಮಹಿಳೆಯನ್ನು ಮಾನಭಂಗ ಮಾಡಲೆತ್ನಿಸಿ ರಾಜೀನಾಮೆ ನೀಡಬಹುದೇ ? ಸಿಎಂ ಅವರು ಹಾಲಪ್ಪನವರ ಬಗ್ಗೆ ಆಡಿರುವ ಮಾತು ಕೂಡ ಪೊಲೀಸರಲ್ಲಿ ಯಾವ ಸಂದೇಶ ರವಾನಿಸಿದಂತಾಗಿದೆ. ತನಿಖೆ ನಡೆಯುವುದಾದರೂ ಹೇಗೆ ?
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಟ್ಟಕಡೆಯ ಸಾಮಾನ್ಯ ಮನುಷ್ಯನಿಂದ ದೇಶದ ಪ್ರಧಾನಮಂತ್ರಿಗೂ ಕಾನೂನು ಒಂದೇ. ಹೀಗಾಗಿ ಅತ್ಯಾಚಾರ ಎಂಬ ಗಂಭೀರ ಆರೋಪಕ್ಕೆ ಒಳಗಾಗಿರುವ ಹಾಲಪ್ಪ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಸರಕಾರ ಈ ವಿಷಯದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಸ್ವಹಿತಾಸಕ್ತಿ ಮರೆತು ಧೈರ್ಯದಿಂದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಮತ್ತು ಆಕೆಯ ಗಂಡನಿಗೆ ಸೂಕ್ತ ರಕ್ಷಣೆ ನೀಡಬೇಕು. ರಾಜಕೀಯದಲ್ಲಿರುವ ಕಚ್ಚೆಹರುಕ ನಾಯಕರ ಜನ್ಮ ಜಾಲಾಡಿರುವ ಸಮಸ್ತ ಕನ್ನಡಿಗರ ಹೆಮ್ಮೆ ವಿಜಯ ಕರ್ನಾಟಕ ಪತ್ರಿಕೆಯ ಕೆಲಸ ಶ್ಲಾಘನೀಯ.












Click it and Unblock the Notifications