ಬೆಚ್ಚಿಬೀಳುವಂತೆ ಮಾಡುವ ಆಸ್ಪತ್ರೆ

ಈಗ ಇದೇ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಚರ್ಚೆಗೆ ಬರುವಂತಾಗಿರುವುದು ಮಾತ್ರ ಶೋಷನೀಯ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಿಂದಲೂ ಅನೇಕರು ತಮ್ಮ ಕಾಯಿಲೆಗಳನ್ನು ಸರಿಪಡಿಸಿಕೊಂಡು ಗುಣಮುಖರಾಗಲು ಈ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಲ್ಲಿ ಪ್ರತಿದಿನವೂ ಸಾವಿರ ಸಾವಿರ ಸಂಖ್ಯೆಯಲ್ಲಿ ರೋಗಿಗಳು ಬರುವುದೇನೋ ಸರಿ...
ರೋಗಿಗಳು ಗುಣಮುಖರಾಗಿ ಹೊರ ಹೋಗುತ್ತಾರೋ, ಬಿಡುತ್ತಾರೋ ಆ ಮಾತು ಬೇರೆ. ಆದರೆ ರೋಗಿಗಳಿಗೆ ಬಳಸಿದಂತಹ ಸಿರೆಂಜ್, ನೀಡಲ್ಸ್, ಕೈ ಗ್ಲೌಸ್‌ಗಳು ಮತ್ತು ಇನ್ನಿತರ ಔಷಧಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೇ ಈ ತ್ಯಾಜ್ಯ ವಸ್ತುಗಳನ್ನು ಆಸ್ಪತ್ರೆಯ ಆವರಣದಲ್ಲಿ ಬೇಕಾಬಿಟ್ಟಿ ಎಸೆಯುತ್ತಾರಲ್ಲಾ ದಿ ಗ್ರೇಟ್ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳು ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ಉತ್ತರಿಸಬೇಕು.
ಪ್ರತಿದಿನ ಆಸ್ಪತ್ರೆಯಿಂದ ತ್ಯಾಜ್ಯ ವಸ್ತುಗಳು ಹೊರಬೀಳಲಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂಬ ಆದೇಶವಿದೆ. ಆದರೂ ಇಲ್ಲಿನ ಸಿಬ್ಬಂದಿಗಳು ಆದೇಶಗಳನ್ನು ಗಾಳಿಗೆ ತೂರಿದ್ದು, ಆಸ್ಪತ್ರೆಯ ಆವರಣದಲ್ಲಿ ಖಾಲಿ ಜಾಗ ಕಣ್ಣಿಗೆ ಬಿದ್ದರೆ ಸಾಕು ಯಾರ ಮುಲಾಜಿಗೆ ಒಳಗಾಗದೆ ತ್ಯಾಜ್ಯ ವಸ್ತುಗಳನ್ನು ಆವರಣದಲ್ಲೇ ಸುರಿದು ತಮ್ಮ ಪಾಡಿಗೆ ತಾವು ಹೊರಟು ಹೋಗುತ್ತಾರೆ. ಅದೇನೆ ಇರಲಿ ಬಿಡಿ. ನಂತರದ ಸರದಿ ಚಿಂದಿ ಆಯುವವರದು. ತ್ಯಾಜ್ಯ ವಸ್ತುಗಳನ್ನು ಸುರಿದು ಅತ್ತ ಹೋದ ಕೂಡಲೇ ತಕ್ಷಣವೆ ಚಿಂದಿ ಆರಿಸುವವರು ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ಇದರಲ್ಲಿ ಯಾವ ಪವಾಡವಿದೆಯೋ ಆ ಭಗವಂತನೇ ಬಲ್ಲ!
ಇಷ್ಟೆಲ್ಲಾ ನಡೆದರೂ ತುಕ್ಕು ಹಿಡಿದಿರುವ ಮೆಗ್ಗಾನ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಇದ್ಯಾವುದು ಗಮನಕ್ಕೆ ಬರುವುದಿಲ್ಲ. ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಉಪದೇಶ ನೀಡುವ ಆಸ್ಪತ್ರೆಯ ಸಿಬ್ಬಂದಿಗಳು ಈ ರೀತಿ ಬೇಜವಾಬ್ದಾರಿತನ ತೋರುವುದು ಎಷ್ಟರ ಮಟ್ಟಿಗೆ ಸರಿ? ಏಕೆಂದರೆ ಸ್ವಲ್ಪ ಯಾಮಾರಿದರೂ ಈ ತ್ಯಾಜ್ಯ ವಸ್ತುಗಳಿಂದ ಅನೇಕ ರೋಗಗಳು (ಗುಣಪಡಿಸಲಾಗದ) ಹರಡುವ ಸಾಧ್ಯತೆ ಇದ್ದು, ತೊಂದರೆ ಉಂಟಾಗುವ ಮೊದಲೇ ತುಕ್ಕು ಹಿಡಿದಿರುವ ಮೆಗ್ಗಾನ್ ಆಸ್ಪತ್ರೆಯ ಆಡಳಿತ ಯಂತ್ರ ಶೀಘ್ರವೇ ಕಾರ್ಯಪ್ರವೃತ್ತರಾಗಿ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿಗಳ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಏನಾದರೊಂದು ಅನಾಹುತ ಸಂಭವಿಸಿ ಅದಕ್ಕೆ ಸರಿಯಾದ ಬೆಲೆ ಕಟ್ಟಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.












Click it and Unblock the Notifications