ಚನ್ನಪಟ್ಟಣದಲ್ಲಿ ಶುರುವಾಗಿದೆ ರಂಗೀನ್ ರಾಜಕೀಯ

ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುವ ಅಭ್ಯರ್ಥಿಗಳು ಈಗ ತಾಲೂಕು ಪಂಚಾಯಿತಿ ಕಛೇರಿ ಬಳಿ ಬೀಡುಬಿಟ್ಟಿದ್ದು, ತಮ್ಮ ದಾಖಲೆಗಳನ್ನು ಒದಗಿಸಿಕೊಳ್ಳಲು ಕಾತರರಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ಪ್ರಮುಖವಾಗಿ ಬೇಕಾಗಿರುವ ಜಾತಿ-ಆದಾಯ ಪ್ರಮಾಣ ಪತ್ರ, ದೃಢೀಕರಣ, ಆಸ್ತಿ-ಪಾಸ್ತಿ ವರದಿ ಮುಂತಾದವುಗಳನ್ನು ಹೊಂದಿಸಿಕೊಳ್ಳಲು ಅಭ್ಯರ್ಥಿಗಳು ಪಟ್ಟಣದಲ್ಲಿ ಬೀಡುಬಿಟ್ಟಿದ್ದಾರೆ.
ಇನ್ನು ಸ್ಪರ್ಧಿಸಲು ಅಭ್ಯರ್ಥಿಗಳ ಆಯ್ಕೆ ಆಗದಿರುವ ಗ್ರಾಮಗಳಲ್ಲಿ ಆಯ್ಕೆಗೆ ತೀವ್ರ ಲಾಬಿ ನಡೆಯುತ್ತಿದ್ದು, ಕೆಲವೆಡೆ ಅವಿರೋಧ ಆಯ್ಕೆಗಾಗಿ ಪ್ರತಿಸ್ಪರ್ಧಿಗಳನ್ನು ಮನವೊಲಿಸುವ ಕಾರ್ಯ ನಡೆದಿದೆ. ಈ ಬಾರಿ ಮೀಸಲಾತಿ ಪಟ್ಟಿಯಲ್ಲಿ ಎಲ್ಲಾ ಜನಾಂಗಗಳಿಗೂ ಪ್ರಾತಿನಿಧ್ಯ ನೀಡಿರುವುದರಿಂದ ಆಯಾ ಜನಾಂಗಗಳ ಮುಖಂಡರು ಸೇರಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಿದೆ.
ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಸನ್ನದ್ದರಾಗಿರುವ ಹುರಿಯಾಳುಗಳು ಮತದಾರರ ಓಲೈಕೆಯಲ್ಲಿ ನಿರತರಾಗಿದ್ದು, ಆಮಿಷಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದನ್ನೇ ಸದುಪಯೋಗಪಡಿಸಿಕೊಂಡಿರುವ ಕೆಲ ಪುಡಾರಿಗಳು ಒಂದಿಷ್ಟು ಕಾಸು ಮಾಡಲು ಖಾದಿ ಬಟ್ಟೆ ಧರಿಸಿ ರೆಡಿಯಾಗಿದ್ದಾರೆ. ಪ್ರತಿದಿನ ಒಂದಿಷ್ಟು ಮತದಾರರ ಗುಂಪು ಕಟ್ಟಿಕೊಂಡು ಹತ್ತಿರದ ಮದಿರೆ ದೇಗುಲ'ಗಳ ಬಳಿ ಬೀಡು ಬಿಡುತ್ತಿರುವ ಅಭ್ಯರ್ಥಿಗಳು, ಮತದಾರರಿಗೆ ಮದ್ಯ ದೇವನ' ಸಾಕ್ಷಾತ್ ದರ್ಶನ ಮಾಡಿಸಿ, ಅವರನ್ನು ಪುನೀತರನ್ನಾಗಿಸುತ್ತಿರುವುದು ಈಗಾಗಲೇ ಅಲ್ಲಲ್ಲಿ ಕಂಡುಬರುತ್ತಿದೆ. ಕೆಲ ಬುದ್ದಿವಂತರು ಈಗಾಗಲೇ ಚುನಾವಣೆಗೆ ಬೇಕಾಗುವ ಮದ್ಯವನ್ನು ಈಗಲೇ ಸಂಗ್ರಹಿಸುತ್ತಿದ್ದಾರೆಂಬ ಬಿಸಿಬಿಸಿ ಸುದ್ದಿಯೂ ಕೂಡಾ ಹೊರಬಂದಿದೆ.
ಪಂಚಾಯಿತಿ ಚುನಾವಣೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದ್ದು, ಈಗಾಗಲೇ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಒಳಗೊಳಗೇ ಕಸರತ್ತು ನಡೆಸಲಾರಂಭಿಸಿವೆ. ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂಬ ಹಠತೊಟ್ಟಿದ್ದು, ಚುನಾವಣೆ ಮತ್ತಷ್ಟು ರಂಗೇರುವ ಸಾಧ್ಯತೆ ಹೆಚ್ಚಾಗಿದೆ.
ಮದಿರೆಯ ಹೊಳೆ : ಬೇರೆಲ್ಲಾ ಆಮಿಷಗಳಿಗಿಂತ ಮುಗ್ಧ ಹಳ್ಳಿಗರನ್ನು ಸೆಲೆಯಲು ಮದಿರೆಯೇ ಅಭ್ಯರ್ಥಿಗಳ ಟ್ರಂಪ್ ಕಾರ್ಡ್ ಆಗಲಿದೆ. ಇನ್ನು ಮಹಿಳೆಯರ ಮತಗಳನ್ನು ಸೆಳೆಯಲು ಸ್ತ್ರೀಶಕ್ತಿ ಸಂಘಗಳನ್ನು ಸಂಪರ್ಕಿಸಿ, ಇಂತಿಷ್ಟು ಹಣ ನೀಡುವುದಾಗಿ ಒಡಂಬಡಿಕೆ ಮಾಡಿಕೊಂಡು ಬುಕ್‌ಮಾಡಿಕೊಳ್ಳುವತ್ತಲೂ ಸಹ ಅಭ್ಯರ್ಥಿಗಳು ಹಿಂದೆ ಬಿದ್ದಿಲ್ಲ. ಸಾಲದ ಹಣಕ್ಕಾಗಿ ದಂಬಾಲು ಬೀಳುತ್ತಿರುವ ಕೆಲ ಸ್ತ್ರೀಶಕ್ತಿ ಸಂಘಗಳಿಗೆ ಇದು ವರದಾನವಾಗಿದ್ದು, ಬ್ಯಾಂಕ್‌ನಲ್ಲಿ ತಿಂಗಳುಗಟ್ಟಲೆ ಕಾದು ಸಾಲ ಪಡೆಯುವುದಕ್ಕಿಂತ ಪುಕ್ಸಟ್ಟೆ ಸಿಗುವ ಇದೇ ಮಾರ್ಗ ಸುಲಭ ಎಂದು ಖುಷಿಯಲ್ಲಿ ತೇಲುತ್ತಿದ್ದಾರೆ.
ಆಮಿಷಗಳದ್ದೇ ಕಾರುಬಾರು: ಗ್ರಾಮದ ದೇವಾಲಯಗಳ ರಿಪೇರಿ, ಸಂಘಕ್ಕೆ ಹಣ, ವೋಟಿಗೆ ಹಣ, ಮದ್ಯದ ಸ್ನಾನ, ಸಮಾರಾಧನೆ... ಇವುಗಳು ಮತದಾರರನ್ನು ಒಲಿಸಲು ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಆಮಿಷಗಳ ಸಾಲಿನಲ್ಲಿದ್ದು, ಗ್ರಾಮಗಳ ಅಭಿವೃದ್ದಿಯ ಭರವಸೆ ಇಲ್ಲಿ ಇಲ್ಲದಿದ್ದರೂ, ಮಿಕ್ಕ ಎಲ್ಲವುಗಳನ್ನು ಈಡೇರಿಸಲು ಅಭ್ಯರ್ಥಿಗಳು ಈಗಾಗಲೇ ತಯಾರಿ ನಡೆಸಿದ್ದಾರೆ.
ಒಟ್ಟಾರೆ ನಾಮಪತ್ರ ಸಲ್ಲಿಸುವ ಮೊದಲೇ ಹಳ್ಳಿಗಾಡಿನಲ್ಲಿ ಚುನಾವಣೆ ನಾಟಕದ ಸೆಟ್ಟೇರಿದ್ದು, ಈಗಾಗಲೇ ಪಾತ್ರಧಾರಿಗಳು ಪ್ರೇಕ್ಷಕರನ್ನು ದಂಗುಬಡಿಸುವಂತೆ ನಾಟಕ ಆರಂಭಿಸಿದ್ದಾರೆ. ಇನ್ನೂ ಈ ನಾಟಕ ಪ್ರಾರಂಭದ ಹಂತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಯಾವ ಪಾತ್ರಧಾರಿಗಳು ಏಳುತ್ತಾರೆ, ಯಾರು ಬೀಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.












Click it and Unblock the Notifications