ಹೈದರಾಬಾದಿನಲ್ಲಿ ದಂಬಿರಿಯಾನಿ ಕಾಜು ಹಲ್ವ

ಸಾನಿಯಾ ಮದುವೆ ಪಾಕಿಸ್ತಾನದಲ್ಲಿ ನಡೆಯುವುದೆಂಬ ಮೀಡಿಯಾ ವದಂತಿಗಳನ್ನು ನಂಬಬಾರದೆಂದು ಹೇಳಿರುವ ಸಾನಿಯಾ ಕುಟುಂಬದ ಹಿರಿಯರು, ಅವಳ ಮದುವೆ ಭಾರತದಲ್ಲೇ ಜರುಗುವುದೆಂದು ಶನಿವಾರ ಬೆಳಗ್ಗೆ ಹೈದರಾಬಾದಿನಲ್ಲಿ ನೀಡಿರುವ ಸ್ಪಷ್ಟನೆಯಲ್ಲಿ ಸುಸ್ಪಷ್ಟಪಡಿಸಿದ್ದಾರೆ. ಪ್ರಳಯವೇನೂ ಆಗದಿದ್ದರೆ ಈ ಮದುವೆ ಇದೇ ಏಪ್ರಿಲ್ ಗುರುವಾರ 15 ರಂದು ಮುಸ್ಲಿಂ ಮತಾನುಯಾಯಿಗಳ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸಂಭವಿಸುತ್ತದೆ.
ತಮಗೆ ಈಗಾಗಲೇ ಗೊತ್ತಿರುವಂತೆ ಸಾನಿಯಾ ಮತ್ತು ಶೊಯೇಬ್ ಮದುವೆ ನಾನಾ ಬಗೆಯ ವಿವಾದಗಳನ್ನು ಸೃಷ್ಟಿಸಿದೆ. ಅವಳು ಪಾಕಿಸ್ತಾನದ ಪ್ರಜೆಯನ್ನು ಮದುವೆಯಾಗಬಾರದು ಎಂದು ದಟ್ಸ್ ಕನ್ನಡದ ಒಂದು ವರ್ಗದ ಓದುಗರು ಒತ್ತಾಯಿಸುತ್ತಲೇ ಇದ್ದಾರೆ. ಶಿವಸೇನೆ ಕಾರ್ಯಕರ್ತರು, ಶ್ರೀರಾಮ ಸೇನೆ ಕಾರ್ಯಕರ್ತರಂತೂ ಈ ಮದುವೆ ವಿಷಯವಾಗಿ ಅಸಮಾಧಾನಗೊಂಡು ಕಿಡಿಗಳನ್ನು ಕಾರುತ್ತಲೇ ಇದ್ದಾರೆ. ಈ ಮಧ್ಯೆ, ಯಾರು ಯಾರನ್ನು ಯಾಕೆ ಯಾವಾಗ ಮದುವೆ ಆದರೆ ತಮಗೇನು ಬಂತು ಭಾಗ್ಯ ಎಂಬ ನಿಲವು ತಳೆದಿರವ ಉಭಯ ರಾಷ್ಟ್ರಗಳ ಜನಸ್ತೋಮ ನಿರ್ವಿಕಾರಭಾವದಿಂದಿದೆ.
ಇದೇ ವೇಳೆ, ಈ ವಿವಾದ ಅಂಕೆ ಮೀರಿದ ಪಕ್ಷದಲ್ಲಿ ಭದ್ರತೆ, ಕಾನೂನು ಮತ್ತು ಶಿಸ್ತು ಪಾಲನೆ ಸವಾಲುಗಳು ಹುಟ್ಟಿಕೊಳ್ಳುವುದರಿಂದ ಅವರೀರ್ವರ ಮದುವೆ ಮಂಟಪವನ್ನು ಪಾಕ್ ನೆಲಕ್ಕೆ ವರ್ಗಾಯಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಸಾನಿಯಾ ಮನೆಯವರು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ಇನ್ನೊಂದೆಡೆ ಅಯೇಶಾ ಸಿದ್ದಿಕಿ ಎಂಬುವವಳನ್ನು ಶೊಯೇಬ್ ಈಗಾಗಲೇ ಮದುವೆಯಾಗಿದ್ದೂ ಕೂಡ ಇನ್ನೊಂದು ಮದುವೆಗೆ ತಯ್ಯಾರಾಗಿರುವುದು ಆ ಹೆಣ್ಣುಮಗಳ ಕುಟುಂಬದವರನ್ನು ಸಿಟ್ಟಿಗೇಳಿಸಿದೆ. ಅಯೇಶಾಳನ್ನು ಮಲ್ಲಿಕ್ ಮದುವೆ ಮಾಡಿಕೊಂಡಿದ್ದು ಈಗ ಅವಳನ್ನು ಡಿಚ್ ಅಂತ ನಡುನೀರಿನಲ್ಲಿ ಬಿಟ್ಟಿದ್ದಾನೆ ಎಂದು ಸಿದ್ದಿಕಿ ಕುಟುಂಬ ಆರೋಪಿಸಿದೆ.
ಮಲ್ಲಿಕ್ ಮತ್ತು ಸಾನಿಯಾ ಮದುವೆ ಆದರೆ ಬಿಕ್ಕಟ್ಟಿನಲ್ಲಿರುವ ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧಗಳು ಸುಧಾರಿಸುತ್ತವೆ ಎಂದು ನಂಬುವವರೂ ಕೆಲವರಿದ್ದಾರೆ. ಸಾನಿಯಾ ಶೋಯಬ್ ವರಿಸಿದರೆ ನೆರೆಹೊರೆ ಮಧುರವಾಗಿರುತ್ತದೆ ಎಂಬ ನಿರೀಕ್ಷೆ ಕೆಲವರದು. ಇದು ಸತ್ಯವೇ ಆದ ಪಕ್ಷದಲ್ಲಿ ವಿದೇಶಾಂಗ ಖಾತೆಯ ಎಸ್ ಎಂ ಕೃಷ್ಣ, ತರೂರ್ ಮತ್ತು ಪಾಕಿಸ್ಥಾನ ವಿದೇಶಾಂಗ ಕ್ಯಾತೆಯ ಶಾ ಮಹಮೂದ್ ಖುರೇಷಿ ನಿರುದ್ಯೋಗಿಗಳಾಗಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಾಗುತ್ತದೆ.
ಅದೇನೇ ಇರಲಿ. ಕರ್ನಾಟಕದ ಪಕ್ಕದಲ್ಲೇ ಇರುವ ಹೈದರಾಬಾದಿನಲ್ಲಿ ಸಾನಿಯಾ ಮದುವೆ ಆಗುತ್ತಿರುವುದು ಒಂದು ದೃಷ್ಟಿಯಿಂದ ಒಳ್ಳೆಯ ಸುದ್ದಿಯೇ. ರಾತ್ರಿ ಬೆಂಗಳೂರಿನಲ್ಲಿ ರೈಲು ಹತ್ತಿ ಮಲಗಿದರೆ ಬೆಳಗ್ಗೆ ಹೈದರಾಬಾದಿನಲ್ಲಿ ಇಳಿಯಬಹುದು. ಆಹ್ವಾನ ಪತ್ರಿಕೆ ಇದ್ದವರು ಕಲ್ಯಾಣ ಮಂಟಪಕ್ಕೆ ತೆರಳಿ ಲೋಕವಿಕ್ಯಾತ ಹೈದರಾಬಾದ್ ದಂ ಬಿರಿಯಾನಿ ಮತ್ತು ಕಾಜೂ ಹಲ್ವ ತಿಂದು ದಂಪತಿಗಳನ್ನು ಆಶೀರ್ವದಿಸಿ ಇನ್ನೊಂದು ರೈಲು ಹತ್ತಿ ಬೆಂಗಳೂರಿಗೆ ಅದೇ ದಿನ ವಾಪಸಾಗಬಹುದು.












Click it and Unblock the Notifications