ಆನೇಕಲ್ ಶಾಲೆಗೆ ಹೊಸ ಗ್ರಂಥಾಲಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.'ಮುಖ್ಯಮಂತ್ರಿ' ಚಂದ್ರು ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ. ಶಾಲೆಗೆ ಮೂಲಸೌಕರ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಶ್ರೇಯೋಭಿವೃದ್ಧಿಗೆ ಚಾಲಕ ಶಕ್ತಿಯಾಗಿರುವ ಶ್ರೀಕೃಷ್ಣಾನಂದ ಗುರೂಜಿ ಹಾಗೂ ಅನಿವಾಸಿ ಭಾರತೀಯ ಎಂ. ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಶಾಲಾ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಇದಕ್ಕೆ ಮುನಿಶಾಮಪ್ಪ ಸ್ಮಾರಕ ಸಭಾಂಗಣ ಎಂದು ಹೆಸರಿಡಲಾಗಿದೆ. ಈ ಕಟ್ಟಡದ ಮೇಲೆ ಈಗ ಎರಡು ಹೊಸ ಕೋಣೆಗಳನ್ನು ಕಟ್ಟಲಾಗಿದ್ದು ಅದನ್ನು ಗ್ರಂಥಾಲಯ ಮತ್ತು ಕಂಪ್ಯೂಟರ್ ಕೋಣೆಯಾಗಿ ಬಳಸಲು ಶಾಲೆಯ ಆಡಳಿತ ನಿರ್ಧರಿಸಿದೆ.
ನೂತನ ಗ್ರಂಥಾಲಯ ಹಾಗೂ ಕಂಪ್ಯೂಟರ್ ಕೋಣೆಗಳ ನಿರ್ಮಾಣ ಹಾಗೂ ಮೇಜು ಕುರ್ಚಿ ಮುಂತಾದ ಶೈಕ್ಷಣಿಕ ಸಲಕರಣೆಗಳನ್ನು ಒದಗಿಸಲು ಸುಮಾರು 8 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದ್ದು ಈ ನಿಧಿಯನ್ನು ಕೃಷ್ಣಾನಂದ ಗುರೂಜಿ ಮತ್ತು ಎಂ. ಕೃಷ್ಣಮೂರ್ತಿ ಜಂಟಿಯಾಗಿ ದೇಣಿಗೆಯಾಗಿ ನೀಡಿರುತ್ತಾರೆ.
ಸಾಮಾನ್ಯವಾಗಿ ಸರಕಾರಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ತೀರಾ ದುಸ್ಥಿತಿಯಲ್ಲೇ ಕಾರ್ಯನಿರ್ವಹಿಸುತ್ತವೆ. ಸರಕಾರದಿಂದ ಯಾವುದೇ ರೀತಿಯ ಹೊಸ ನೆರವುಗಳು ಈ ಕಡೆ ಹರಿದು ಬರುವುದಿಲ್ಲ. ಹಾಗಾಗಿ, ಸ್ಥಳೀಯರು, ದಾನಿಗಳು, ಯಾವುದಾದರೂ ಸ್ವಯಂಸೇವಾಸಂಸ್ಥೆಗಳು ಅಥವಾ ಶಾಲೆಯ ಹಳೆ ವಿದ್ಯಾರ್ಥಿಗಳು 'ತಾವು ಓದಿದ ಶಾಲೆ' ಎಂಬ ಅಭಿಮಾನದಿಂದ ಸೌಕರ್ಯಗಳನ್ನು ಕಲ್ಪಿಸಿದರೆ ಉಂಟು ಇಲ್ಲವಾದರೆ ಇಲ್ಲ.
ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ಸುಜಾತಾ ರಾಜಣ್ಣ, ಶಾಸಕ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮುಂತಾದವರು ಭಾಗವಹಿಸುತ್ತಾರೆ.












Click it and Unblock the Notifications