ಭಾರತಕ್ಕೆ ಬರುವುದಿಲ್ಲ ಅಂದುಕೊಂಡಿದ್ದೆ, ರೈ

ಕಷ್ಟ ಕಾರ್ಪಣ್ಯಗಳ ನಡುವೆ ಸುಪ್ರೀಂ ಕೋರ್ಟ್ ನನ್ನ ಮೇಲಿನ ಕೊನೆಯ ಆರೋಪವನ್ನು ತಳ್ಳಿ ಹಾಕಿ ನಿರಪರಾಧಿ ಎಂದು ಘೋಷಿಸಿದ್ದರೆ ಅದಕ್ಕೆ ಈ ದೇವರೇ ಕಾರಣ. ನನ್ನ ದೇಹಕ್ಕೆ ಐದು ಗುಂಡುಗಳು ತಾಗಿದ ಮೇಲೂ ನಾನು ಬದುಕಿದ್ದರೆ ಅದಕ್ಕೆ ಈ ದೇವರೇ ಕಾರಣ. ಈ ಮಹಾಲಿಂಗೇಶ್ವರನನ್ನು ನಂಬಿದರೆ ಆತ ಎಂದೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಈ ಮುತ್ತಪ್ಪ ರೈಯೇ ಸಾಕ್ಷಿ ಎಂದರು.
ಜೀವಮಾನದಲ್ಲಿ ಇನ್ನೆಂದೂ ಈ ಭಾರತಕ್ಕೆ ಬರುವುದಿಲ್ಲ ಎಂದು ಕೊಂಡಿದ್ದವನು ನಾನು. ಅಂತಹ ನನ್ನನ್ನು ಈ ಪುತ್ತೂರಿಗೆ ತಂದು ನಿಲ್ಲಿಸಿದ್ದು ಇನ್ಯಾರೂ ಅಲ್ಲ. ಇದೇ ಶ್ರೀ ಮಹಾಲಿಂಗೇಶ್ವರ ಎಂದು ಮುತ್ತಪ್ಪ ರೈ ತಮ್ಮ ಮಾನಸಮೂರ್ತಿಯನ್ನು ಮನಸಾ ಸ್ಮರಿಸಿದರು.
'ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ 'ಎಂದ ಬಸವಣ್ಣನ ಭಕ್ತಿ. ದೇವರಿಗೆ ಇದು ನಾನು ಕೊಡುವುದಲ್ಲ. ಇಲ್ಲಿ ನಾನು ನಿಮಿತ್ತ ಮಾತ್ರ ಎನ್ನುವ ಮುತ್ತಪ್ಪ ರೈಯ ಭೀಮಭಕ್ತಿ ಇವೆರಡಕ್ಕೂ ಸರ್ವಜನರ ಅನುಮೋದನೆ ಇದೆ. ಮುತ್ತಪ್ಪ ರೈಗಳು ನೀಡಿದ
ಬ್ರಹ್ಮರಥ ದೇವರಿಗೆ ಸಮರ್ಪಣೆಯಾಗಿದೆ.
ಹೀಗೆಂದು ಮಂಗಳ ವಚನ ನೀಡಿದವರು ಡಾ. ವೀರೇಂದ್ರ ಹೆಗ್ಗಡೆ. ಸೋಮವಾರ ಪುತ್ತೂರಿನಲ್ಲಿ ಸಂಭ್ರಮದ ಜಾತ್ರೆ. ಲಕ್ಷಾಂತರ ಮಂದಿಯ ಸಾಮೂಹಿಕ ಅವತರಣಿಕೆ. ಇವರೆಲ್ಲರ ನಡುವೆ ಕಾಣಿಸುವ ಮುತ್ತಪ್ಪ ರೈ. ಸಂಜೆಯ ಹೊತ್ತು ಶ್ರೀ ಮಹಾಲಿಂಗೇಶ್ವರನಿಗೆ ಮುಖಮಾಡಿ ನಿಂತ ವೇದಿಕೆಯಲ್ಲಿ ಸಮಾರೋಪ ಸಮಾರಂಭ. ಚಿತ್ತಾಕರ್ಷಕ ಪತಾಕೆ, ಬಣ್ಣದ ದೀಪಗಳಿಂದ ಕಂಗೊಳಿಸುವ ಬೃಹದಾಕಾರದ ಬ್ರಹ್ಮರಥ. ಡಾ. ಹೆಗ್ಗಡೆ ಅವರಿಂದ ಮುತ್ತಪ್ಪ ರೈಗಳಿಗೆ ಪೂರ್ಣ ಆಶೀರ್ವಾದ.
ಸಂಕಲ್ಪ ಶುದ್ಧವಾಗಿದ್ದರೆ ಭಗವಂತ ಅದನ್ನು ಸ್ವೀಕರಿಸುತ್ತಾನೆ. ರಥ ಕೊಡುವುದು ಮುತ್ತಪ್ಪ ರೈಗಳ ಇಚ್ಛೆಯಾಗಿದ್ದಿರಬಹುದು. ಆದರೆ ಇಂತಹ ಸುಂದರ ಕಲಾಕೃತಿಯೇ ತನಗೆ ಬೇಕು ಎಂದು ಅಪೇಕ್ಷಿಸಿದ್ದು ಮಾತ್ರ ಶ್ರೀ ಮಹಾಲಿಂಗೇಶ್ವರ. ಅದಕ್ಕಾಗಿಯೇ ಇಂತಹ ಅಪೂರ್ವ ರಥ ಇಲ್ಲಿ ಸಾಕಾರಗೊಂಡಿದೆ. ರಥ ಮತ್ತು ಎತ್ತಿನಗಾಡಿ ಎಂದೂ ಬದಲಿಸಲಾಗದ ಮೂಲ ವಾಹನ. ಬ್ರಹ್ಮರಥ ಭಾರತೀಯರ ಅನನ್ಯ ಸಂಶೋಧನೆ. ಅಂತಹ ವೈಭವದ ರಥವನ್ನು ಇಂದು ಸಿದ್ಧಪಡಿಸಿದ ಶಿಲ್ಪಿಗಳು, ಕೊಡುಗೆ ನೀಡಿದ ಮುತ್ತಪ್ಪ ರೈಗಳು ಸದಾ ನೆನಪಲ್ಲಿ ಉಳಿಯುತ್ತಾರೆ ಎಂಬುದು ಹೆಗ್ಗಡೆಯವರ ಮಾತುಗಳಾಗಿದ್ದವು.












Click it and Unblock the Notifications