ಬಿಬಿಎಂಪಿ ಚುನಾವಣೆಗೆ ಮಾ 28 ರಂದು ಮತದಾನ

ಮಾರ್ಚ್ 30ರೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶನಿವಾರ ವೇಳಾಪಟ್ಟಿ ಬಿಡುಗಡೆಗೊಳಿಸುವುದು ಅನಿವಾರ್ಯವಾಗಿತ್ತು. ಅಂತೂ ಕೊನೆಗೂ ಮೂರುವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚುನಾವಣೆಗೆ ಮುಹೂರ್ತ ನಿಗದಿಯಾದಂತಾಗಿದೆ.
ಸರ್ಕಾರದ ಮೇಲ್ಮನವಿ: ಇಷ್ಟಾದರೂ ಚುನಾವಣಾ ಪ್ರಕ್ರಿಯೆ ಮುಗಿಸಲು 18ದಿನಗಳ ಕಾಲಾವಕಾಶ ಕೋರಿ ಮತ್ತೊಮ್ಮೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ ಎಂದು ಅಡ್ವೋಕೆಟ್ ಜನರಲ್ ಅಶೋಕ್ ಹಾರ್ನಳ್ಳಿ ಹೇಳಿದರು..ಏಪ್ರಿಲ್ ಒಂದರಿಂದ 18ರವರೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆಸುವುದರಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೇ, ಈ ಸಂದರ್ಭದಲ್ಲಿ ಚುನಾವಣೆ ನಡೆಸದಂತೆ ಪೋಷಕರಿಂದ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾಲಾವಕಾಶ ಕೋರಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮೀಸಲಾತಿ ಪ್ರಶ್ನಿಸಿ ಅರ್ಜಿ: ಬಿಬಿಎಂಪಿ ಮೀಸಲಾತಿ ಪಟ್ಟಿಯಲ್ಲಿ ಲೋಪದೋಷಗಳಿವೆ ಎಂದು ಆರೋಪಿಸಿ ಶ್ಯಾಮಸುಂದರ ಎಂಬುವವರು ಕೋರ್ಟ್‌ಗೆ ರಿಟ್ ಸಲ್ಲಿಸಿದ್ದಾರೆ. ವಿಜನಾಪುರ, ಬಸವಪುರ ವಾರ್ಡ್‌ಗಳ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ವಾರ್ಡ್ ಗಳ ಮರುವಿಂಗಡಣೆ, ಮೀಸಲಾತಿ ನೆಪದ ನಂತರ ಸರ್ಕಾರ ಈ ಬಾರಿ ಪರೀಕ್ಷೆಯ ನೆಪವೊಡ್ಡಿದೆ. ಎರಡೂ ಅರ್ಜಿಗಳು ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.
ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ವಿವರ:
ಒಟ್ಟು 198 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಸಂಬಂಧಿತ ದೂರು ದಾಖಲಿಸಲು 6 ಕಂಟ್ರೋಲ್ ರೂಂ ಗಳನ್ನು ಸ್ಥಾಪಿಸಲಾಗಿದೆ. ನಾಳೆಯಿಂದ ಕಂಟ್ರೋಲ್ ರೂಂ ಆರಂಭ. ಒಟ್ಟು 6617 ಲಕ್ಷ ಮತದಾರರಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ಹೇಳುತ್ತದೆ. ಚುನಾವಣಾ ಸಂದರ್ಭದಲ್ಲಿನ ಪ್ರಮುಖ ದಿನಾಂಕಗಳು ಇಂತಿವೆ.
ಮಾ.7: ಚುನಾವಣಾ ಅಧಿಸೂಚನೆ ಹಾಗೂ ನೀತಿ ಸಂಹಿತೆ ಜಾರಿ.
ಮಾ.8: ನಾಮಪತ್ರ ಸಲ್ಲಿಕೆ ಆರಂಭ.
ಮಾ. 15 :ನಾಮಪತ್ರ ಸಲ್ಲಿಕೆಗೆ ಕೊನೆ ದಿನ.
ಮಾ.17: ನಾಮಪತ್ರ ಪರಿಶೀಲನೆ.
ಮಾ.19: ನಾಮಪತ್ರ ಹಿಂಪೆಡೆಯಲು ಕೊನೆದಿನ.
ಮಾ.28 ರಂದು ಚುನಾವಣೆ
ಏ.4: ಮರು ಮತದಾನಕ್ಕೆ ಅವಕಾಶ
ಏ.5. ಫಲಿತಾಂಶ( ಬೆಳಗ್ಗೆ 8 ರಿಂದ)
ಏ.6 : ಚುನಾವಣಾ ಪ್ರಕ್ರಿಯೆ ಅಂತ್ಯ












Click it and Unblock the Notifications