ಪವರ್ ಕಟ್ ಆಗದಂತೆ ಕ್ರಮ:ಯಡ್ಡಿ

ಇದೇ ಮಾರ್ಚ್ 1 ರಿಂದ 850 ಮೆಗಾವ್ಯಾಟ್ ನಷ್ಟು ವಿದ್ಯುತ್ ಖರೀದಿಸುವುದರ ಮೂಲಕ ವಿದ್ಯುತ್ ಅಭಾವವನ್ನು ಮೆಟ್ಟಿ ನಿಲ್ಲಲಾಗುವುದೆಂಬ ಭರವಸೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೀಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು "ಮಾರ್ಚ್ ಮತ್ತು ಏಪ್ರಿಲ್ ತಿಂಗಳಿಗೆ ಪೂರೈಕೆ ಆಗುವಂತೆ 800 ಕೋಟಿ ರುಪಾಯಿ ವೆಚ್ಚದಲ್ಲಿ ವಿದ್ಯುತ್ ಖರೀದಿಸಲಾಗುವುದು. ಕಳೆದ ವರ್ಷ ಈ ಹೊತ್ತಿಗೆ ಪ್ರತಿದಿನ 125 ದಶಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿತ್ತು. ಆದರೆ, ಈಗ 135 ದಶಲಕ್ಷ ಯೂನಿಟ್ ಆಗಿದೆ. ಬೇಡಿಕೆ ಮತ್ತು ಪೂರೈಕೆ ನಡುವೆ ಉಂಟಾಗಿರುವ ಕಂದಕ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ರಾಜ್ಯದ ಜನತೆಗೆ ಅಭಯ ನೀಡಿದರು.
ಎಲ್ಲ ರಾಜ್ಯಗಳಲ್ಲೂ ವಿದ್ಯುತ್ ಸಮಸ್ಯೆ ತೀವ್ರಗೊಂಡಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿದ್ಯುತ್ ಸಮಸ್ಯೆ ಬಗ್ಗೆ ಪ್ರತಿಪಕ್ಷಗಳು ಬೀದಿಯಲ್ಲಿ ನಿಂತು ಮಾತನಾಡುವ ಬದಲು ಅಧಿವೇಶನದಲ್ಲಿ ಚರ್ಚೆ ನಡೆಸಲಿ ಎಂದು ಸವಾಲು ಹಾಕಿದರು. ವಿದ್ಯುತ್ ಅಭಾವ, ನೈಸ್ ವಿವಾದ, ಭೂಸ್ವಾಧೀನ ಮತ್ತಿತರ ಸಮಸ್ಯೆಗಳ ಬಗೆಗೆ ಜನತೆಗೆ ತಪ್ಪು ಮಾಹಿತಿ ನೀಡುತ್ತಿರುವವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.












Click it and Unblock the Notifications