ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧ : ಈಶ್ವರಪ್ಪ

ಇಂದು ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ಭೇಟಿಯಾದ ಬಿಜೆಪಿ ಸಮನ್ವಯ ಸಮಿತಿ ಮೇಲ್ಮನೆಗೆ ವಿ ಸೋಮಣ್ಣ ಹೆಸರನ್ನು ರಾಜ್ಯಪಾಲ ತಿರಸ್ಕರಿಸಿದ್ದು, ಬಿಬಿಎಂಪಿ ಚುನಾವಣೆ, ಬಜೆಟ್ ಮಂಡನೆ ಕುರಿತಂತೆ ಚರ್ಚಿಸಿತು. ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ, ಜಗದೀಶ್ ಶೆಟ್ಟರ್, ಅರುಣ್ ಜೇಟ್ಲಿ ಮುಂತಾದವರು ಭಾಗಿಯಾಗಿದ್ದರು.
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಭಾರತೀಯ ಜನತಾ ಪಕ್ಷಕ್ಕೆ ಬಿಬಿಎಂಪಿ ಚುನಾವಣೆ ಎದುರಿಸುವ ಭಯ ಇಲ್ಲ. ಹೈಕೋರ್ಟ್ ಆದೇಶದಂತೆ ಮಾರ್ಚ್ 30ರೊಳಗೆ ಚುನಾವಣೆ ನಡೆಸುವುದಾಗಿ ಹೇಳಿದರು. ಆದರೆ, ಶಾಲಾ ಕಾಲೇಜು ಪರೀಕ್ಷೆಗಳು ಅದೇ ಸಮಯದಲ್ಲಿ ಇರುವುದರಿಂದ ಶಿಕ್ಷಕರ ಸೇವೆಯನ್ನು ಪಡೆಯದೇ ಚುನಾವಣೆ ಹೇಗೆ ನಡೆಸುತ್ತದೆ ಎಂಬುದೇ ಮುಂದಿರುವ ಪ್ರಶ್ನೆ.
ಸೋಮಣ್ಣ ಅವರ ಹೆಸರನ್ನು ಮೇಲ್ಮನೆಗೆ ಶಿಫಾರಸು ಮಾಡಿದ್ದನ್ನು ತಿರಸ್ಕರಿಸಿರುವ ಸಂಗತಿಯನ್ನು ಕೂಡ ಚರ್ಚಿಸಿದ ಸಮಿತಿ, ಸದ್ಯಕ್ಕೆ ಮರುಶಿಫಾರಸು ಮಾಡದಿರಲು ನಿರ್ಧರಿಸಿದೆ. ಜೊತೆಗೆ ಬಾಗಲಕೋಟೆಯ ನಾರಾಯಣ ಸಾ. ಭಾಂಡಗೆ ಅವರ ಹೆಸರನ್ನು ಮೇಲ್ಮನೆಗೆ ಶಿಫಾರಸು ಮಾಡಲು ತೀರ್ಮಾನಿಸಿದೆ.











Click it and Unblock the Notifications