ಚಾಮಯ್ಯ ಮೇಷ್ಟ್ರು ಹೀಗೆಲ್ಲಾ ಮಾತನಾಡಿದ್ದರು!

* ಶಿ.ಜು.ಪಾಶ, ಶಿವಮೊಗ್ಗ
"ನಾನು ಇಲ್ಲಿಯವರೆಗೆ 371 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಬದುಕಿನ ಲೆಕ್ಕಾಚಾರ ಉಲ್ಟಾ ಆದ ಪರಿಣಾಮವಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಕಳೆದ 6 ವರ್ಷಗಳಿಂದ ಪ್ರತಿನಿತ್ಯವೂ 13 ಮಾತ್ರೆಗಳನ್ನು ಸೇವಿಸಬೇಕಾಗಿದೆ. ಸಿನಿಮಾ ರಂಗ ನನ್ನ ಬಡತನವನ್ನು ದೂರಮಾಡಿ ಶ್ರೀಮಂತಿಕೆ ತಂದುಕೊಡುತ್ತದೆ ಎಂದು ಭಾವಿಸಿದ್ದೆ. ಅದು ಆಗಲಿಲ್ಲ..."
2007ರ ಫೆಬ್ರವರಿ ತಿಂಗಳಿನಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಸಿನಿಮಾ ಲೋಕದ ಮರ್ಯಾದ ಪುರುಷೋತ್ತಮ ಡಾ|.ಕೆ.ಎಸ್.ಅಶ್ವಥ್ ಹೀಗೊಂದು ವಿಷಾದ ಬಹಿರಂಗಪಡಿಸಿದ್ದರು. ಅಮೇರಿಕಾ ಸಂಸ್ಥಾನದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟವು ಕೆ.ಎಸ್.ಅಶ್ವಥ್‌ರಿಗೆ ಆರೋಗ್ಯದ ಖರ್ಚುಗಳನ್ನು ನಿಭಾಯಿಸಲೆಂದು ಕನ್ನಡಾಭಿಮಾನಿಗಳಿಂದ ಚೆಕ್‌ಗಳನ್ನು ಪಡೆದು ನೀಡಿದ್ದ ಸಂದರ್ಭದಲ್ಲಿ ಹೀಗೆ ಗದ್ಗದಿತರಾಗಿದ್ದರು.
ಅದೊಂದು ಕನ್ನಡ ಸಿನಿಮಾದ ಕ್ಯಾಸೆಟ್ ಬಿಡುಗಡೆಯ ಸಂದರ್ಭ. 2006ರ ಜುಲೈ ತಿಂಗಳು. ಮೋಹಿನಿ ಎಂಬ ಸಿನಿಮಾದ ಕ್ಯಾಸೆಟ್ ಬಿಡುಗಡೆಗೆಂದು ಮೈಸೂರಿನಿಂದ ಡಾ|.ಕೆ.ಎಸ್.ಅಶ್ವಥ್ ತಮ್ಮ ಮಗಳ ಜೊತೆ ಬೆಂಗಳೂರಿಗೆ ಆಗಮಿಸಿದ್ದರು. ಹೋಟೆಲ್ ಏಟ್ರಿಯಾದಲ್ಲಿ ಒಂದಿಷ್ಟು ಹೊತ್ತು ಪತ್ರಕರ್ತರ ಕೈಗೆ ಸಿಕ್ಕರು. ಪತ್ರಕರ್ತರೆಂದರೆ ಡಾ|.ಕೆ.ಎಸ್.ಅಶ್ವಥ್‌ರಿಗೆ ವಿಶೇಷ ಪ್ರೀತಿ. ಡಾ|.ಕೆ.ಎಸ್.ಅಶ್ವಥ್ ಎಂದರೆ ಪತ್ರಕರ್ತರಿಗೂ ಸಹ ಅಷ್ಟೇ ಪ್ರೀತಿ ಮತ್ತು ಗೌರವ. ಒಂದಿಷ್ಟು ಜನ ಪತ್ರಕರ್ತರು ಡಾ|.ಕೆ.ಎಸ್.ಅಶ್ವಥ್‌ರನ್ನು ಸುತ್ತುವರೆದರು. ಸಹಜವಾಗಿ ಪ್ರಶ್ನೋತ್ತರ ಆರಂಭವಾಯಿತು.
* ಹೇಗಿದ್ದೀರಿ ಅಶ್ವಥ್‌ಜೀ?
- ಪ್ಯಾರಾಲಿಟಿಕ್ ಸ್ಟ್ರೋಕ್‌ನಿಂದ ಸುಧಾರಿಸಿಕೊಳ್ಳುತ್ತಿದ್ದೇನೆ. ದೇಹದ ಎಡಭಾಗ ಬಲಕಳೆದುಕೊಂಡಿದೆ. ಆದರೆ, ನನ್ನ ಹೃದಯ ಬಹಳ ಸ್ಟ್ರಾಂಗ್. ನಾನು ಪ್ರತಿನಿತ್ಯ ಕೇವಲ 40 ನಿಮಿಷ ನಡೆಯಬಲ್ಲೆ. ಹೀಗಿದ್ದೇನೆ ನೋಡಿ.
* ನಿಮ್ಮ ಸಮಯವನ್ನು ಹೇಗೆ ಕಳೆಯುತ್ತೀರಿ?
- ನನ್ನ ಬಳಿ ನೆನಪುಗಳ ಮಹಾಪೂರವೇ ಇದೆ. ಆ ನೆನಪುಗಳೊಂದಿಗೆ ಮೈಮರೆಯುತ್ತೇನೆ.
* ಏನಾದರೂ ಎರಡು ಮಾತಾಡಿ?
- ಪತ್ರಕರ್ತರು ನೀವೇ ಬಂದಿದ್ದೀರಿ. ಆದರೆ, ನಾನೊಂದು ಕುತೂಹಲದ ವಿಷಯ ಹೇಳಲಿದ್ದೇನೆ ಎಂಬುದು ನಿಮಗೆ ಗೊತ್ತಾ?
* ಅಂಥ ಕುತೂಹಲದ ವಿಷಯವಾದರೂ ಏನು?
- ನನ್ನ ಪಾರ್ಕಿನ ಗೆಳೆಯ ಅದೊಂದು ದಿನ ನಾಗರಹಾವು ಸಿನಿಮಾ ಟಿವಿಯಲ್ಲಿ ಬರುತ್ತಿದೆ ನೋಡು ಎಂದು ಹೇಳಿದ್ದ. ನಾನು ಆಗ 34 ವರ್ಷಗಳ ಹಿಂದಿನ ನಾಗರಹಾವು ಸಿನಿಮಾವನ್ನು ನೋಡಲೆಂದು ಟಿವಿ ಹಾಕಿದೆ. ಟಿವಿಯಲ್ಲಿ ಕೋಟಿಗೊಬ್ಬ ಸಿನಿಮಾ ಬರುತ್ತಿತ್ತು. ಕೂಡಲೇ ಆ ಪಾರ್ಕಿನ ಗೆಳೆಯನಿಗೆ ಫೋನು ಮಾಡಿ ಕೋಟಿಗೊಬ್ಬ ಸಿನಿಮಾ ಬರುತ್ತಿರುವುದನ್ನು ಹೇಳಿದೆ. ಆತ ಚಾನಲ್ ಛೇಂಜ್ ಮಾಡಲು ತಿಳಿಸಿದ ಮೇಲೆ ನಾನು ಆ ಕೆಲಸ ಮಾಡಿದೆ. ನಾಗರಹಾವು ಸಿನಿಮಾದ ಒಂದಿಷ್ಟು ಉಳಿದ ಭಾಗಗಳನ್ನು ಆಗ ನೋಡುವಂತಾಯಿತು.
* ನಾಗರಹಾವು ಸಿನಿಮಾವನ್ನು ಮತ್ತೆ ನೋಡಿದ ನಂತರದಲ್ಲಿ ನಿಮಗೆ ಏನನ್ನಿಸಿತು?
- ಚಿತ್ರದುರ್ಗಾದ ಕಲ್ಲಿನಕೋಟೆಯಲ್ಲಿ ಪುಟ್ಟಣ್ಣರವರ ಜೊತೆ ಕಳೆದ ಸಮಯ ಮತ್ತೆ ಮತ್ತೆ ನೆನಪಾಯಿತು. ಅತ್ಯುತ್ತಮ ಸಿನಿಮಾಗಳನ್ನು ಪುಟ್ಟಣ್ಣ ನೀಡಿದ್ದರೂ ಸಹ ಅವರ ಕೈಗೆ ಕನ್ನಡದ ನಿರ್ಮಾಪಕರು ಯಾವುದೇ ಸಿನಿಮಾವನ್ನು ನಿರ್ದೇಶನ ಮಾಡಲು ನೀಡುತ್ತಿರಲಿಲ್ಲ. ಅದೊಂದು ನೋವು ಅವರು ಹಂಚಿಕೊಂಡಿದ್ದರು. ಆ ಬಗ್ಗೆ ಬಹಳಷ್ಟು ನಾವು ಮಾತನಾಡಿದ್ದೆವು. ಹೀಗೆಲ್ಲಾ ಯಾಕಾಗುತ್ತದೆ ಎಂಬ ನೋವು ಈಗಲೂ ನನಗೆ ಕಾಡುತ್ತದೆ.
* ನಿಮಗೆ ಇಷ್ಟವಾಗುವ ನಿರ್ದೇಶಕರು ಯಾರು?
- ಪುಟ್ಟಣ್ಣ ಮತ್ತು ಎಸ್.ವಿ.ರಾಜೇಂದ್ರಸಿಂಗ್ ಬಾಬು. ಈ ಇಬ್ಬರೂ ನಿರ್ದೇಶಕರು ಪಾತ್ರಗಳನ್ನು ಅದ್ಭುತವಾಗಿ ರೂಪಿಸುತ್ತಿದ್ದರು. ಅಲ್ಲಿ ಪೋಷಕ ಪಾತ್ರಗಳಿಗೂ ಸಹ ಮರ್ಯಾದೆ ಸಿಗುತ್ತಿತ್ತು.
* ನಮ್ಮ ಸಂಸ್ಕೃತಿ ಬದಲಾಗುತ್ತಿರುವುದರ ಬಗ್ಗೆ ಹೇಳಿ?
- (ಮುಗುಳ್ನಗುತ್ತಾ) ನಾನು ಬಲ್ಲೆ... ಹುಡುಗ್ರು, ಹುಡುಗೀರು ಅವರವರ ಡ್ರೆಸ್‌ಗಳನ್ನು ಎಕ್ಸ್‌ಚೇಂಜ್ ಮಾಡಿಕೊಂಡ ಹಾಗೆ ಕಾಣುತ್ತಿದೆ.
* ಹಿರಿಯ ನಾಗರೀಕರಾಗಿ ನೀವು ಏನನ್ನು ಹೇಳಲು ಬಯಸುತ್ತೀರಿ?
- ನಾನು ಆ ವ್ಯಾಪ್ತಿಯಲ್ಲಿ ಇಲ್ಲ. ಅದು ನನ್ನ ವ್ಯಾಪ್ತಿಯಿಂದ ದೂರಿವಿದೆ.
* ಪ್ರತಿ ದಿನ ಏನು ಮಾಡುತ್ತೀರಿ?
- ಅತ್ಯುತ್ತಮ ನಿದ್ದೆ ಮಾಡುತ್ತೇನೆ. ಒಂದಿಷ್ಟು ಹೊತ್ತು ನಡೆಯುತ್ತೇನೆ. ಪತ್ರಿಕೆಗಳನ್ನು ಓದುತ್ತೇನೆ. ಟಿವಿ ನೋಡುತ್ತೇನೆ.
* ನಿಮಗೆ ಪತ್ರಿಕೆಗಳ ಬಗ್ಗೆ ಏನನಿಸುತ್ತದೆ?
- ಇವತ್ತಿನ ದಿನದಲ್ಲಿ ನ್ಯೂಸ್ ಪೇಪರ್ ಪಾಲಿಸಿ ಯಾಕೋ ಸರಿಕಾಣುತ್ತಿಲ್ಲ. ಹಿಂದಿನ ದಿನಗಳಲ್ಲಿ ಪತ್ರಿಕೆಗಳು ಒಂದು ರಾಜ್ಯ ಮತ್ತು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದವು. ಆದರೀಗ ಸ್ಥಳೀಯ ಆವೃತ್ತಿಗಳ ಕಾರಣದಿಂದಾಗಿ ಆಯಾ ಸ್ಥಳದಲ್ಲಿ ಮಾತ್ರ ಪತ್ರಿಕೆಗಳು ನಿಂತುಬಿಟ್ಟಿವೆ. ನನಗೀಗ ಮೈಸೂರಿನ ಸುದ್ದಿಗಳನ್ನು ಓದಬೇಕೆಂದರೆ ಮೈಸೂರಿಗೇ ಹೋಗಬೇಕು. ಹಾಗಾಗಿದೆ ಪರಿಸ್ಥಿತಿ. ಧಾರವಾಡ, ಬೆಳಗಾಂನ ಸುದ್ದಿಯನ್ನು ಓದುವ ಕುತೂಹಲವಿರುತ್ತದಾದರೂ ಅಲ್ಲಿನ ಸುದ್ದಿಗಳು ನಮಗೆ ಓದಲು ಸಿಗುತ್ತಿಲ್ಲ. ಯಾಕೆ ಹೀಗೆಲ್ಲಾ ಆಗುತ್ತಿದೆ?
* ಡಾ| ರಾಜ್‌ಕುಮಾರ್ ಕುರಿತು ಹೇಳಿ?
- ಡಾ| ರಾಜ್‌ಕುಮಾರ್ ಎಂದರೆ ಸುಮ್ಮನೆ ಮಾತಲ್ಲ. ಅವರ ಕೆಲಸಗಳು ಅತ್ಯದ್ಭುತ. ಅವರು ಎಂದಿಗೂ ನಮ್ಮ ಮನಸ್ಸಿನಿಂದ ಅಳಿಯಲು ಸಾಧ್ಯವಿಲ್ಲ. ಅವರು ನಮ್ಮ ಬದುಕಿನ ಮತ್ತು ನಮ್ಮ ಸಮಾಜದ ಒಂದು ಅಂಗವಾಗಿದ್ದರು. ಅವರು ಎಲ್ಲರಂತೆ ನಮ್ಮ ಜೊತೆಗೆ ಬದುಕಿದ್ದರು ಎಂಬುದೇ ನಮಗೆಲ್ಲಾ ಸಂತೋಷದ ಸಂಗತಿ.
* ನಿಮಗೆ ರಾಷ್ಟ್ರಪ್ರಶಸ್ತಿ ಕೈಗೂಡಲಿಲ್ಲ ಯಾಕೆ?
- ಯಾಕ್ರೀ ಬೇಕು ಅಪ್ಲಿಕೇಷನ್ ಹಾಕಿ ಪಡೆಯೋ ಅವಾರ್ಡ್. ಈ ಕ್ಷಣದವರೆಗೂ ಜನ ನನ್ನನ್ನು ಚಾಮಯ್ಯ ಮೇಸ್ಟ್ರು ಎಂದೇ ಗುರುತಿಸುತ್ತಾರೆ. ಆ ಪ್ರೀತಿ ಮುಂದೆ ರಾಷ್ಟ್ರಪ್ರಶಸ್ತಿ ಉಳಿಯುತ್ತಾ?
ಹೀಗೆಲ್ಲಾ ಮನಸ್ಸಿನಲ್ಲಿದ್ದುದನ್ನು ಇದ್ದ ಹಾಗೆಯೇ ಹೇಳಿಬಿಡುತ್ತಿದ್ದ ಚಾಮಯ್ಯ ಮೇಷ್ಟ್ರು ಓರ್ವ ಅದ್ಭುತ ವ್ಯಕ್ತಿಯಾಗಿದ್ದರು. ಈಗ ಅವರಿಲ್ಲ.
ಗ್ಯಾಲರಿ: ಮೇರುನಟ ಅಶ್ವಥ್ ಚಿತ್ರಸಂಪುಟ












Click it and Unblock the Notifications