ರಾತ್ರೋರಾತ್ರಿ ಟೆಂಡರ್ : ಸಿಎಂ ನಿವಾಸಕ್ಕೆ 'ಕೈ' ಮುತ್ತಿಗೆ

ಟೆಂಡರ್ ಪ್ರಕ್ರಿಯೆ ಕುರಿತು ಸಮಗ್ರ ವರದಿಯನ್ನು 2 ದಿನಗಳಲ್ಲಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕೆಲವೇ ಗಂಟೆಗಳ ಮುನ್ನ ಪಾಲಿಕೆಯಲ್ಲಿ ನಡೆದ ಬೃಹತ್ ಮೊತ್ತದ ಟೆಂಡರ್ ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ. ನಿಯಾಮಾವಳಿ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆದಿದ್ದರೆ ಅಭ್ಯಂತರವಿಲ್ಲ. ಆದರೆ, ಪ್ರತಿ ಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಸರಕಾರದಿಂದ ವಿವರಣೆ ಕೇಳಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ರವೀಂದ್ರನಾಥ ತಿಳಿಸಿದ್ದಾರೆ.
ನಿವಾಸದ ಮುಂದೆ ಧರಣಿ
ಪಾಲಿಕೆಯಲ್ಲಿ ರಾತ್ರೋರಾತ್ರಿ ಟೆಂಡರ್ ಪ್ರಕ್ರಿಯೆ ನಡೆಸಿದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಶುಕ್ರವಾರ ರಾತ್ರಿ ಮುತ್ತಿಗೆ ಹಾಕಿದರು. ರೇಸ್ ಕೋರ್ಸ್ ರಸ್ತೆಯಿಂದ ಮುಖ್ಯಮಂತ್ರಿಯವರ ಅಧಿಕೃತ ನಿವಾಸದವರೆಗೆ ಮುಂದೆ ಮೊಂಬತ್ತಿ ಹಚ್ಚಿ ಧರಣಿ ನಡೆಸಿದ ಕಾರ್ಯಕರ್ತರು 3,400 ಕೋಟಿ ರುಪಾಯಿ ಟೆಂಡರ್ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡರಾದ ವಿಎಸ್ ಉಗ್ರಪ್ಪ, ಕೃಷ್ಣ ಭೈರೇಗೌಡ, ಎಸ್ ಟಿ ಸೋಮಶೇಖರ್, ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ನಿವಾಸದತ್ತ ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.












Click it and Unblock the Notifications