ಅಕ್ರಮ ಸಕ್ರಮಕ್ಕೆ ಶೀಘ್ರ ಸುಗ್ರೀವಾಜ್ಞೆ: ಬಿಎಸ್ ವೈ

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಅಕ್ರಮ ಸಕ್ರಮ ಯೋಜನೆಯನ್ನು ಶೀಘ್ರವೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತದೆ ಎಂದರು. ಬಿಬಿಎಂಪಿ ವ್ಯಾಪ್ತಿಯ ಕಂದಾಯ ಭೂಮಿಯಲ್ಲಿರುವ ಕೊಳೆಗೇರಿಗಳನ್ನು ಸಹ ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಯಾವುದೇ ಗೊಂದಲವಿಲ್ಲದಂತೆ, ಸುಪ್ರೀಂಕೋರ್ಟ್ ಆದೇಶದಂತೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಫೆಬ್ರವರಿ 21ರಂದು ನಡೆಯಲಿದೆ. ಇದಕ್ಕೆ ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಿದರು.
ಕಡಿಮೆ ಆದಾಯವುಳ್ಳವರಿಗೆ ಆರೋಗ್ಯ ವಿಮೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳಿಗೆ, ಕಡಿಮೆ ಆದಾಯದ ಕುಟುಂಬಗಳಿಗೆ, ಪರಿಶಿಷ್ಟ ಜಾತಿ, ಪಂಗಡದ ನಾಗರೀಕರಿಗೆ, ಆಟೋಚಾಲಕರಿಗೆ ಸುವರ್ಣ ಆರೋಗ್ಯ ಕವಚ ಮಾದರಿಯ ಆರೋಗ್ಯ ವಿಮೆ ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು ತಕ್ಷಣ ಜಾರಿಗೆ ತರಲಾಗುವುದು ಎಂದರು.
ಬಿಬಿಎಂಪಿಯಲ್ಲಿ 4 ಸಾವಿರ ಪೌರ ಕಾರ್ಮಿಕರ ಹುದ್ದೆಗಳು ಖಾಲಿಯಿದ್ದು, ಬೆಂಗಳೂರಿನ ಸ್ವಚ್ಛತೆಗೆ ತೊಡಕಾಗಿದೆ. ನೇಮಕಾತಿ ಕ್ರಮಕ್ಕೆ ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ . ಬಿಬಿಎಂಪಿ ವ್ಯಾಪ್ತಿಗೆ ಬರುವ ಸರ್ಕಾರಿ ಜಮೀನುಗಳನ್ನು ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್ ಎಸ್ ಬಿ ಯೋಜನೆಗಳಿಗೆ ಬಳಸಲು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮೇಲ್ಸೆತುವೆ ಸಂಚಾರಕ್ಕೆ ಮುಕ್ತ
ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೆತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಈ ತಿಂಗಳ 14ರಂದು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ 5 ಕಿ.ಮೀ ರಸ್ತೆ ಸಹ ಸಾರ್ವಜನಿಕರ ಬಳಕೆಗೆ ಜ.14ರಂದು ಮುಕ್ತವಾಗಲಿದೆ ಎಂಬ ವಿವರಗಳನ್ನು ಯಡಿಯೂರಪ್ಪ ನೀಡಿದರು.
ಕಳೆದ 19 ತಿಂಗಳಲ್ಲಿ ರು.6,378 ಕೋಟಿ ವೆಚ್ಚದ 24, 412 ಕಾಮಗಾರಿಗಳನ್ನು ಬಿಬಿಎಂಪಿ ಕೈಗೊಂಡಿದೆ. ಇವುಗಳಲ್ಲಿ ರು.1,474 ಕೋಟಿ ವೆಚ್ಚದ 4, 878 ಕಾಮಗಾರಿಗಳು ಪ್ರಗತಿಯಲ್ಲಿವೆ. ಬೆಂಗಳೂರು ಜಲಮಂಡಳಿ ಕಳೆದ19 ತಿಂಗಳಲ್ಲಿ ರು.1, 075 ಕೋಟಿ ವೆಚ್ಚದ 720 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ರು,1, 800 ಕೋಟಿ ವೆಚ್ಚದ ಕಾಮಗಾರಿಗಳು ಅನುಷ್ಠಾನದ ಹಂತದಲ್ಲಿವೆ ಎಂದರು.
ಬಿಡಿಎ ನಿರ್ಮಿಸುತ್ತಿರುವ 10 ಮೇಲ್ಸೆತುವೆ ಕಾಮಗಾರಿಗಳಲ್ಲಿ ಅಗರ ಮತ್ತು ದಿಬ್ಬಲೂರು ಮೇಲ್ಸೆತುವೆ ಕಾಮಗಾರಿಗಳು ಮಾರ್ಚ್ ವೇಳೆಗೆ ಪೂರ್ಣವಾಗಲಿವೆ ಎಂದು ವಿವರ ನೀಡಿದರು. ಸಭೆಯಲ್ಲಿ ಸಚಿವರಾದ ಅರವಿಂದ ಲಿಂಬಾವಳಿ, ಆರ್ ಅಶೋಕ್, ರಾಮಚಂದ್ರೇಗೌಡ, ಸುರೇಶ್ ಕುಮಾರ್, ಬೆಂಗಳೂರು ಬಿಜೆಪಿ ಶಾಸಕರು ಪಾಲ್ಗೊಂಡಿದ್ದರು.












Click it and Unblock the Notifications