ಆಸ್ಪತ್ರೆಯಿಂದ ಪರಾರಿಯಾದ ಆಂಧ್ರ ಸಂಸದ
ವಿಜಯವಾಡ,ಡಿ 21 : ಆಂಧ್ರಪ್ರದೇಶದ ಕಾಂಗ್ರೆಸ್ ಸಂಸದ ಎಂ ಎಲ್ ರಾಜಗೋಪಾಲ್ ವಿಜಯವಾಡದ ಸರಕಾರೀ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ವಿಜಯವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇವರು ಪ್ರತ್ಯೇಕ ತೆಲಂಗಾಣ ರಾಜ್ಯದ ವಿರುದ್ಧ ಆಮರಣಾಂತ ಉಪವಾಸ ಹೋರಾಟ ನಡೆಸುತ್ತಿದ್ದಾಗ ಪೊಲೀಸರು ಇವರನ್ನು ಬಂಧಿಸಿ ವಿಜಯವಾಡದ ಸರಕಾರೀ ಆಸ್ಪತ್ರೆಗೆದಾಖಲಿಸಿದ್ದರು.
ಸರಕಾರಿ ಆಸ್ಪತ್ರೆಯ ಸಿಬಂದಿಗಳು ರಾಜಗೋಪಾಲ್ ಅವರನ್ನು ಖಾಸಾಗಿ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ನಡೆಸುತ್ತಿದ್ದಾಗ ಇವರು ತಮ್ಮ ಗೆಳೆಯರು ಮತ್ತು ಬೆಂಬಲಿಗರೊಂದಿಗೆ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ( ಡಿ 20) ರಾತ್ರಿ ಸುಮಾರು 10 .10ರ ಸುಮಾರಿಗೆ ರಾಷ್ಟ್ರಧ್ವಜ ಹಿಡಿದುಕೊಂಡು ಆಸ್ಪತ್ರೆಯಿಂದ ಹೊರಬಂದ ರಾಜಗೋಪಾಲ್ ತಮ್ಮ ಬೆಂಬಲಿಗರ ಕಾರಿನಲ್ಲಿ ಪರಾರಿಯಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಳೆದ ಆರು ದಿನಗಳಿಂದ ಉಪವಾಸ ಹೂಡಿದ್ದ ರಾಜಗೋಪಾಲ್ ತೆಲಂಗಾಣ ವನ್ನು ಪ್ರತ್ಯೇಕಿಸುವ ಕೇಂದ್ರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.












Click it and Unblock the Notifications