ಸ್ಪೀಕರ್ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ

ನ.17 ರಂದು 11.30 ಕ್ಕೆ 11.30 ಕ್ಕೆ ರಾಜಭವನದಲ್ಲಿ ನಡೆವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಶೆಟ್ಟರ್ ಅವರು ಸಚಿವ ಸಂಪುಟಕ್ಕೆ ಸೇರಲು ಮಹೂರ್ತ ನಿಗದಿಯಾಗಿದೆ.ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ, ಆರೆಸ್ಸೆಸ್ ಮುಖಂಡ ಆನಂದ್ ಸೇರಿದಂತೆ ಪ್ರಮುಖ ನಾಯಕರೊಡನೆ ಸಮಾಲೋಚನಾ ಸಭೆ ನಡೆಯಲಿದ್ದು, ಶೆಟ್ಟರ್ ಅವರು ಪಾಲ್ಗೊಳ್ಳಲಿದ್ದಾರೆ.
ಯಾವ ಖಾತೆ ಸಿಗಬಹುದು?
ಗ್ರಾಮೀಣಾಭಿವೃದ್ಧಿ, ಬೃಹತ್ ಕೈಗಾರಿಕೆ, ವಸತಿ, ಲೋಕೋಪಯೋಗಿ ಖಾತೆ ಸಿಗುವ ಸಾಧ್ಯತೆಯಿದೆ ಎಂಬ ಸುದ್ದಿ ಇದ್ದರೂ ಇನ್ನೂ ಯಾವ ಖಾತೆ ಸಿಗಲಿದೆ ಎನ್ನುವುದು ಸ್ವತಃ ಶೆಟ್ಟರ್ ಅವರಿಗೆ ತಿಳಿದಿಲ್ಲ.ಹಿರಿಯರ ಅಣತಿಯಂತೆ ಸ್ಪೀಕರ್ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದೆ. ಈಗ ಸಚಿವ ಸಂಪುಟಕ್ಕೆ ಸೇರುತ್ತಿರುವುದಕ್ಕೂ ಪಕ್ಷದ ಹಿರಿಯರ ನಿರ್ಧಾರವೇ ಕಾರಣ. ಕ್ರಿಯಾಶೀಲ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದ ಬಳಿಕ ಸ್ಪೀಕರ್ ಹುದ್ದೆಯಲ್ಲಿದ್ದೆ. ಸ್ಪೀಕರ್ ಸ್ಥಾನ ತುಂಬಾ ಗೌರವಯುತವಾದದ್ದು,ಆದರೆ, ಈಗ ಸಕ್ರಿಯ ರಾಜಕೀಯಕ್ಕೆ ಇಳಿಯುತ್ತಿರುವುದು ಖುಷಿಕೊಟ್ಟಿದೆ ಎಂದು ಶೆಟ್ಟರ್ ಸುದ್ದಿಗಾರರಿಗೆ ತಿಳಿಸಿದರು.
ಶೆಟ್ಟರ್ ಅವರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು, ಇಂದು ಶೆಟ್ಟರ್ ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಿರುವುದು ನಮ್ಮ ಎಲ್ಲಾ ಕಾರ್ಯಕರ್ತರಿಗೆ ಸಂತೋಷದ ವಿಷಯವಾಗಿದೆ. ಪಕ್ಷದ ಹಿತದೃಷ್ಟಿಯ ನಿಟ್ಟಿನಲ್ಲಿ ಹಿರಿಯರು ನೀಡಿದ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಆದರೆ, ನಮ್ಮ ಬೇಡಿಕೆ ಈಡೇರಿತು ಎಂದು ಮಾಧ್ಯಮದವರು ಹೇಳುವುದು ಸರಿಯಲ್ಲ. ನಾವು ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.
ಸ್ಪೀಕರ್ ಹುದ್ದೆ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಉದಾಸಿ ಅವರ ಹೆಸರು ಕೇಳಿ ಬರುತ್ತಿದ್ದು, ಸಮನ್ವಯ ಸಮಿತಿ ರಚನೆಯಾಗಿ ಅದು ಕೈಗೊಳ್ಳುವ ನಿರ್ಧಾರದ ಮೇಲೆ ಎಲ್ಲಾ ಅವಲಂಬಿತವಾಗಿದೆ ಎನ್ನಲಾಗಿದೆ.ಸಮನ್ವಯ ಸಮಿತಿ ಇನ್ನೂ ರಚನೆಯಾಗುವ ಹಂತದಲ್ಲಿದ್ದು, ಸಮಿತಿ ಸೇರಲು ಹಿರಿಯ ನಾಯಕರು ಲಾಬಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸದ್ಯ ಯಡಿಯೂರಪ್ಪ, ಕರುಣಾಕರರೆಡ್ಡಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಆರೆಸ್ಸೆಸ್ ನ ಜಿ ಸಂತೋಷ್ ಹಾಗೂ ಸತೀಶ್ ಅವರು ಸಮನ್ವಯ ಸಮಿತಿಯಲ್ಲಿರುವುದು ಖಾತ್ರಿಯಾಗಿದೆ. ಆರ್ ಅಶೋಕ್, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕೂಡ ಸಮಿತಿಯಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications