ಸುಶಮೀಂದ್ರರ ಕಳಾಕರ್ಷಣೆಗೆ ಭಕ್ತರ ದಂಡು ?

ತುಂಗಭದ್ರೆ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಂತ್ರಾಲಯ ರಾಘವೇಂದ್ರಸ್ವಾಮಿ ಮಠದ ವರ್ಚಸ್ಸು ಬುಧವಾರ ಮರಳಿ ಗಳಿಸಿಕೊಂಡಿತು. ದುಃಖ-ದುಮ್ಮಾನ ಗಳನ್ನು ರಾಯರ ಸನ್ನಿಧಾನಕ್ಕೆ ಅರ್ಪಿಸಿದ ಜನಸ್ತೋಮ ಪಾವನವಾಯಿತು. ತಾತ್ಕಾಲಿಕ ವೃಂದಾವನದಲ್ಲಿ ಇರಿಸಿದ್ದ ಸುಶಮೀಂದ್ರ ತೀರ್ಥರ ಭೌತಿಕ ಕಾಯ ಶಿರ ಭಾಗದವರೆಗೆ ತೆರೆದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಡೆದಾಡುವ ರಾಯರ'ನ್ನು ಮತ್ತೊಮ್ಮೆ ಕಾಣುವ ಕಾತರ, ಈ ಸೌಭಾಗ್ಯ ತಮ್ಮದಾಗಿಸಿಕೊಳ್ಳುವ ಆತುರ ಸಾಲುಗಟ್ಟಿದ ಭಕ್ತರಲ್ಲಿ ಮನೆ ಮಾಡಿತ್ತು.
ತಲೆ ಕೆಳಗು: ತುಂಗಭದ್ರೆ ನೆರೆಗೆ ಸಿಕ್ಕು ಸಿಮೆಂಟ್ ಕಾಂಕ್ರೀಟ್ ಕಟ್ಟಡಗಳು ನೆಲಕಚ್ಚಿದ್ದವು. ಎರಡು ದಿನ ಶ್ರೀಮಠ ಜಲಾವೃತ, ತಾತ್ಕಾಲಿಕ ವೃಂದಾವನ ಜಲ ಸಮಾಧಿಯಾಗಿತ್ತು. ಶ್ರೀಗಳ ಭೌತಿಕ ಕಾಯ ನೋಡುವ ಭಾಗ್ಯ ಇಲ್ಲವಾದೀತು ಎಂಬ ಅನೇಕರ ದಿಗಿಲು ತಲೆ ಕೆಳಗಾಯಿತು. ಹರಿಪಾದ ಸೇರಿ ಏಳು ತಿಂಗಳಾದವು. ಮಹಾಪೂರದ ಅಟ್ಟಹಾಸದ ನಡುವೆ ಮಾಸದ ತೇಜಸ್ಸು, ಅದೇ ಸಾತ್ವಿಕ ನಗುವಿನ ಮೊಗ ಕಂಡು ವಿಸ್ಮಿತರಾದರು. ಶಿರಕ್ಕೆ ಶಿರಸಾ ಬಾಗಿ ಎಂದಿನಂತೆ ನಿಷ್ಕಳಂಕ ಮೂರ್ತಿಯ ಆಶೀರ್ವಾದ ಬೇಡಿದರು.
ತಗ್ಗಿನಲ್ಲಿದ್ದ ಹತ್ತಾರು ಬಕೆಟ್‌ಗಳ ನೀರು ಎತ್ತಿ ಹಾಕಲಾಗಿತ್ತು. ಆದರೆ, ಭೌತಿಕ ಕಾಯದ ರಕ್ಷಣೆಗಿಟ್ಟಿದ್ದ ಸಾಸಿವೆ ಹಾಗೂ ಉಪ್ಪು ಕರಗಿದ್ದಿಲ್ಲ ಯಥಾಸ್ಥಿತಿಯಲ್ಲಿರುವುದು ಪವಾಡ' ಎಂದು ಅಯಾಚಿತವಾಗಿ ಉದ್ಗರಿಸಿದರು. ಜನಗಣ: ಮಂತ್ರಾಲಯದ ಮುಖ್ಯ ಬೀದಿ, ನದಿ ದಂಡೆ, ಶ್ರೀಮಠದ ಆವರಣ ಹಾಗೂ ಶ್ರೀಗಳ ಭೌತಿಕ ಕಾಯವಿದ್ದ ಜಾಗದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ನಾನಾ ರಾಜ್ಯಗಳ ಭಕ್ತರು ಮಂಗಳವಾರ ರಾತ್ರಿಯಿಂದಲೇ ಬಿಡಾರ ಹೂಡಿದ್ದರು. ಬುಧವಾರ ನಸುಕು ಧಾರ್ಮಿಕ ವಿಧಿ-ವಿಧಾನಗಳು ಶುರುವಾಗುವಷ್ಟರಲ್ಲಿ ಸರತಿ ಸಾಲು ಬಹು ಉದ್ದಕ್ಕೆ ಬೆಳೆದಿತ್ತು. ಬೆಳಗ್ಗೆ ಭೌತಿಕ ಕಾಯಕ್ಕೆ ಶಾಸ್ತ್ರೋಕ್ತ ವಿಧಿಗಳು ನೆರವೇರಿದರೆ, ನಂತರದ ನಾಲ್ಕು ತಾಸು ಭಾವೋತ್ಕರ್ಷದ ಹವಿಸ್ಸು ಭಕ್ತರು ಅರ್ಪಿಸಿದರು.
ದರ್ಶಿಸಿ ಬಂದ ಭಕ್ತರು ಸಂಭ್ರಮದಲ್ಲಿ ಮೈಮರೆತು ಕುಣಿದರು, ಮಾತಿನಲ್ಲಿ ಹೇಳಲಾಗದ ಅನುಭವವೆಂದು ಆನಂದಬಾಷ್ಪ ಸುರಿಸಿದರು. ಬಂದೋಬಸ್ತ್: ಜನ ಸಾಗರವನ್ನು ಶ್ರೀಮಠ ನಿರೀಕ್ಷಿಸಿದ್ದರಿಂದ ದರ್ಶನಕ್ಕೆ ವ್ಯತ್ಯಯವಾಗದಂತೆ ವ್ಯವಸ್ಥೆ ಮಾಡಿತ್ತು. ಶ್ರೀಮಠದ ಭದ್ರತಾ ಸಿಬ್ಬಂದಿ, ಆಂಧ್ರದ 500 ಪೊಲೀಸರು ಕಾವಲಿಗೆ ನಿಂತು ನೂಕು ನುಗ್ಗಲು ತಪ್ಪಿಸಿದರು. 30,000 ಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
(ಸ್ನೇಹ ಸೇತು- ವಿಜಯ ಕರ್ನಾಟಕ)












Click it and Unblock the Notifications