ಬೆಂಗಳೂರು ಚೆನ್ನೈ ನಡುವೆ ಬುಲೆಟ್ ಟ್ರೈನ್ ?

ಜಪಾನ್ ವಿದೇಶ ವ್ಯಾಪಾರ ಒಕ್ಕೂಟದ ನಿಯೋಗವು ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ,ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅನುಕೂಲಗಳು, ತಾಂತ್ರಿಕವರ್ಗ ಲಭ್ಯತೆ ಹಾಗೂ ಸರಕಾರದ ನಿಲುವು ಕುರಿತು ನಿಯೋಗಕ್ಕೆ ಮಾಹಿತಿ ನೀಡಲಾಗಿದೆ. ಕೈಗಾರಿಕೆ ಪಾರ್ಕ್ ಸ್ಥಾಪನೆ ಕುರಿತು ಜಂಟಿ ಮೇಲ್ವಿಚಾರಣೆ ಸಮಿತಿ ರಚಿಸಲಾಗುವುದು ಎಂದರು.
ಬುಲೆಟ್ ಟ್ರೈನ್: ಮೈಸೂರು- ಬೆಂಗಳೂರು ಹಾಗೂ ಚೆನ್ನೈ ನಡುವೆ ಬುಲೆಟ್ ಟ್ರೈನ್ ಯೋಜನೆ ಕೈಗೊಳ್ಳಲು ಜಪಾನ್ ವ್ಯಾಪಾರ ಒಕ್ಕೂಟ ಆಸಕ್ತಿ ತೋರಿಸಿದೆ. ಯೋಜನೆ ಮಂಜೂರಿಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಅಂದಾಜು ವೆಚ್ಚ ಮತ್ತಿತರ ವಿವರಗಳೊಂದಿಗೆ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಿಎಂ ಹೇಳಿದರು.
ಇದಲ್ಲದೆ, ಪರಿಸರ ಸ್ನೇಹಿ ಉಪನಗರ ನಿರ್ಮಾಣ, ಕಾರಿಡಾರ್ ರಸ್ತೆ, ಕುಡಿಯುವ ನೀರು, ವಸತಿ ಮತ್ತಿತರ ಯೋಜನೆ ಕೈಗೊಳ್ಳಲು ಆಸಕ್ತಿ ತೋರಿಸಿದೆ. ಯೋಜನೆ ರೂಪಿಸುವ ಸಂಬಂಧ ಶೀಘ್ರವೇ ಸಮಿತಿ ರಚಿಸಲಾಗುವುದು ಎಂದು ಹೇಳಿದರು. ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಹಾಗೂ ಅಧಿಕಾರಿ ಗಳು ಪಾಲ್ಗೊಂಡಿದ್ದರು.
(ಏಜೆನ್ಸೀಸ್)












Click it and Unblock the Notifications