ಸಾಲಬಾಧೆ : ಇಡೀ ಕುಟುಂಬ ಆತ್ಮಹತ್ಯೆಗೆ ಶರಣು

ಮೃತರ ಅಂತ್ಯಕ್ರಿಯೆ ಇಂದು ದೊಡ್ಡಾಲಹಳ್ಳಿಯಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಿಂದ ವಾಪಸಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೃತರ ಕುಟುಂಬಕ್ಕೆ ವೈಯುಕ್ತಿಕವಾಗಿ 50 ಸಾವಿರ ಪರಿಹಾರ ನೀಡಿದರು. ಆಡಿನಲಿಯುತ್ತಿದ್ದ ಮಕ್ಕಳಿಗೂ ವಿಷವುಣಿಸಿ, ತಾವು ವಿಷವುಂಡ ದಂಪತಿ ಮುತ್ತು ಮತ್ತು ಸುನಂದರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಮನೆಮಾಡಿದೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಸಾಲಬಾಧೆ ತಾಳಲಾರದೇ ಕಳೆದೆರಡು ದಿನಗಳ ಹಿಂದೆ ಮುತ್ತು-ಸುನಂದ ದಂಪತಿಗಳು ಮತ್ತು ಮಕ್ಕಳಾದ ಹೇಮಾ, ರವಿ ವಿಷಸೇವಿಸಿದ್ದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಲ್ಕೂ ಮಂದಿ ನಿನ್ನೆ ರಾತ್ರಿ ಎಲ್ಲೂ ಕೊನೆಯುಸಿರೆಳೆದಿದ್ದಾರೆ.
ಬರಗಾಲದಿಂದ ಫಸಲಿಗೆ ಬಂದಂತಹ ಬೆಳೆ ನಾಶವಾಗಿದ್ದರಿಂದ ನಷ್ಟವನ್ನನುಭವಿಸುತ್ತಿರುವ ರೈತರುಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುರದೃಷ್ಟಕರ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಸಂಕಷ್ಟದಲ್ಲಿರುವ ರೈತರ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದರು.
ಆಡಿ ನಲಿಯಬೇಕಾದ ವಯಸ್ಸಿನಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಮುತ್ತು ಮತ್ತು ಸುನಂದ ದಂಪತಿಗಳ ಮಕ್ಕಳಾದ ಹೇಮಾ ಮತ್ತು ರವಿಯೂ ಕೂಡ ಸಾವಿನ ಬಾಗಿಲು ತಟ್ಟಿದ್ದಾರೆ. ಕಷ್ಟದಲ್ಲೇ ಜೀವನ ನಡೆಸುತ್ತಿದ್ದರೂ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹೇಮಾ ಓದಿನಲ್ಲಿ ಸದಾ ಮುಂದಿದ್ದಳು ಮತ್ತು ಪ್ರತಿಭಾವಂತೆಯಾಗಿದ್ದಳು. ಆದರೆ ಸುನಂದ-ಮುತ್ತು ದಂಪತಿಗಳ ಸಾಲದ ಹೊರೆಯಲ್ಲಿ ಏನೂ ಅರಿಯದ ಎರಡು ಕಂದಮ್ಮಗಳು ಕೂಡ ಅಪ್ಪ ಅಮ್ಮನೊಂದಿಗೆ ಸಾವಿನ ವಿಧಿಯಾಟದಲ್ಲಿ ಜತೆಯಾಗಿರುವುದು ದುರದೃಷ್ಟಕರ.
ಕಳೆದೆರಡು ಮೂರು ವರ್ಷಗಳಿಂದ ಬೇರೆಯವರಿಂದ ಭೂಮಿ ಗುತ್ತಿಗೆ ಪಡೆದು ರೇಷ್ಮೆ ಕೃಷಿಯನ್ನೇ ಸುನಂದ-ಮುತ್ತು ದಂಪತಿಗಳು ಅವಲಂಬಿಸಿದ್ದರು. ಆದರೆ ಸರಿಯಾದ ಮಳೆ ಮತ್ತು ಸಮರ್ಪಕ ವಿದ್ಯುತ್ ಇಲ್ಲದೇ ರೇಷ್ಮೆಬೆಳೆ ನಷ್ಟವುಂಟಾಗಿದ್ದರಿಂದ ಸಾಲದ ಕೂಪಕ್ಕೆ ಸಿಕ್ಕ ದಂಪತಿಗಳಿಗೆ ಆತ್ಯಹತ್ಯೆಯೇ ದಾರಿಯಾಯಿತು. ಸ್ಥಳೀಯವಾಗಿ 40 ಸಾವಿರದವರೆಗೂ ಸಾಲ ಮಾಡಿಕೊಂಡಿದ್ದ ದಂಪತಿಗಳು ಶೇಕಡಾ 10 ಮತ್ತು 15ರಂತೆ ಬಡ್ಡಿ ಕಟ್ಟುತ್ತಿದ್ದರು. ಆದರೆ ಬೆಳೆ ನಷ್ಟದಿಂದ ಬಡ್ಡಿ ಅಸಲು ಕಟ್ಟಲಾಗದೇ ಸಾಲದ ಹೊರೆಹೊತ್ತಿಕೊಂಡ ಕುಟುಂಬ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗಿದೆ.












Click it and Unblock the Notifications