ಭಿನ್ನರ ಬಗ್ಗೆ ಪ್ರತಿಕ್ರಿಯೆ ಇಲ್ಲ : ಯಡಿಯೂರಪ್ಪ
ಬೆಂಗಳೂರು, ಅ. 30 : ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮೌನವಹಿಸುವಂತೆ ಪಕ್ಷದ ಹೈಕಮಾಂಡ್ ಆದೇಶ ನೀಡಿದೆ. ಆದ್ದರಿಂದ ನಾನು ಇನ್ನೂ ಮುಂದೆ ಭಿನ್ನಮತದ ಬಗ್ಗೆ ಚಕಾರ ಎತ್ತುವುದಿಲ್ಲ. ಇನ್ನೇನಿದ್ದರೂ ಸಂತ್ರಸ್ತರ ಮನೆಗಳ ನಿರ್ಮಾಣ ಕಾರ್ಯದ ಕಡೆಗೆ ಗಮನ ಹರಿಸುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಭೋಜನಕೂಟದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಇಂದು ನಾನು ಸಂಕಲ್ಪ ಮಾಡಿರುವೆ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಸಭೆ ಮಾಡಿ ಶಾಸಕರ ಕಷ್ಟ ನಷ್ಟಗಳ ವಿಚಾರ ಮಾಡುವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆದಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ಒಪ್ಪಿಸಿರುವೆ. ಅದರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.
ನನ್ನ ಗಮನವೇನಿದ್ದರೂ ಸಂತ್ರಸ್ತರ ಕಡೆಗೆ, ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಮನೆ ಮಠ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕೆಲಸ. ಇದಕ್ಕಾಗಿ ನವೆಂಬರ್ 2 ರಂದು ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮ ಉದ್ಘಾಟಿಸಲು ಕೇಂದ್ರದ ಗೃಹ ಸಚಿವ ಪಿ. ಚಿದಂಬರಂ ಆಗಮಿಸಲಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಪ್ರತಿಪಕ್ಷದ ನಾಯಕ ಎಲ್ ಕೆ ಅಡ್ವಾಣಿ ಅವರನ್ನೂ ಅಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications