ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಕ್ಷಲೋಕದಲ್ಲಿ ಲೀನರಾದ ಕೆರೆಮನೆ

|
Google Oneindia Kannada News

Keremane Mahabala Hegde
ನವರಸಗಳ ಮೂಲಕ ಯಕ್ಷಗಾನ ರಂಗವನ್ನು ಆಳಿದ ಮೇರು ಕಲಾವಿದ ಕೆರೆಮನೆ ಮಹಾಬಲ ಹೆಗಡೆ ಈಗ ನೆನಪು. ಉತ್ತರಕನ್ನಡ ಜಿಲ್ಲೆಯಲ್ಲಿ 1927ರಲ್ಲಿ ಜೂನ್ 30 ರಂದು ಜನಿಸಿದ ಮಹಾಬಲ ಹೆಗಡೆ ಅವರು ಗುರುವಾರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಅಳಕೆಯಲ್ಲಿನ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದರು. ಈ ಮೂಲಕ ಕೆರೆಮನೆಯ ಮತ್ತೊಂದು ಕೊಂಡಿ ಕಳಚಿಕೊಂಡಿತು.

ಸುಮಾರು ಆರುದಶಕಗಳ ಕಾಲ ಯಕ್ಷಗಾನ ರಂಗವನ್ನು ಆಳಿದ ಈಮೇರು ಕಲಾವಿದ ಶೈಕ್ಷಣಿಕವಾಗಿ ಓದಿದ್ದು ಕೇವಲ ನಾಲ್ಕನೇ ತರಗತಿ, ಆದರೆ ಅವರ ಪಾಂಡಿತ್ಯ ಮಾತ್ರ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಹದಿನಾಲ್ಕನೇ ವಯಸ್ಸಿನಲ್ಲಿ ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆ ಅವರ ಪ್ರೇರಣೆಯಲ್ಲಿ ಕಾಲಿಗೆ ಮೊದಲನೇ ಬಾರಿ ಗೆಜ್ಜೆಕಟ್ಟಿ ರಂಗಸ್ಥಳ ಪ್ರವೇಶಿಸಿದ್ದು ಬಂಕಿಕೊಡ್ಲದಲ್ಲಿ 'ವೃಷಸೇನ" ಪಾತ್ರದ ಮೂಲಕ.

ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಪೆರ್ಡೂರು, ಕಮಲಶಿಲೆ ಮೇಳಗಳಲ್ಲಿ ಸುಮಾರು ಮೂರುವರೆದಶಕಗಳ ಕಾಲ ನಾಡಿನಾದ್ಯಂತ ಯಕ್ಷಗಾನ ಕಲಾಸಕ್ತರನ್ನು ನಿಬ್ಬೆರಗುಗೊಳಿಸಿದವರು ಕೆರೆಮನೆ ಮಹಾಬಲ ಹೆಗಡೆ. ಭೀಷ್ಮ, ಕೌರವ, ರುಕ್ಮಾಂಗದ, ಸುಧನ್ವ, ಹರಿಶ್ಚಂದ್ರ, ವಿಶ್ವಾಮಿತ್ರ, ಕೃಷ್ಣ, ಜಮದಗ್ನಿ, ರಾಮ ಹೀಗೆ ನವರಸಗಳ ಪಾತ್ರಗಳ ಮೂಲಕ ರಂಜಿಸಿದ ಕೆಲವೇ ಮಂದಿಯಲ್ಲಿ ಕೆರೆಮನೆಯವರು ಅಗ್ರಪಂಕ್ತಿಯಲ್ಲಿ ಸ್ಥಾನಪಡೆಯುತ್ತಾರೆ.

ನಡೆದಾಡುವ ವಿಶ್ವಕೋಶ, ಕಡಲತಡಿಯ ಭಾರ್ಗವ ಡಾ.ಶಿವರಾಮ ಕಾರಂತರ ಗರಡಿಯಲ್ಲಿ ಪಳಗಿ ಅವರ ಬ್ಯಾಲೆಯಲ್ಲಿ ಅಭಿನಯಿಸಿ ಕಾರಂತರಿಂದ ಸೈ ಅನಿಸಿಕೊಂಡಿದ್ದವರು ಮಹಾಬಲ ಹೆಗಡೆಯವರು ಎನ್ನುವುದೇ ಅವರ ಕಲಾವಂತಿಕೆಗೆ ದೊಡ್ಡ ಸರ್ಟಿಫಿಕೇಟ್ ಅಂದರೂ ತಪ್ಪಾಗದು. ಕಾರಂತರ ಬ್ಯಾಲೆಯಲ್ಲಿ ಭೀಷ್ಮ ವಿಜಯದ ಪರಶುರಾಮ, ಅಭಿಮನ್ಯುಕಾಳಗದ ಅರ್ಜುನ ಜನಮಾನಸದಲ್ಲಿ ಈಗಲೂ ನೆಲೆಯೂರಿದೆ.

ಕೆರೆಮನೆಯವರು ಯಕ್ಷಗಾನ ಕಲಾವಿದರಷ್ಟೇ ಅಲ್ಲ ಓರ್ವ ಅತ್ಯುತ್ತಮ ಹಿಂದೂಸ್ತಾನಿ ಹಾಡುಗಾರ ಕೂಡ, ಶಾಸ್ತ್ರೀಯ ಸಂಗೀತವನ್ನು ಅವರು ಹಾಡುತ್ತಿದ್ದರೆ ಹಾಡಿನ ಮೋಡಿಗೆ ಮರುಳಾಗದವರೇ ಇರುತ್ತಿರಲಿಲ್ಲ ಎನ್ನುವುದನ್ನು ಈಗಲೂ ಅನೇಕರು ಸ್ಮರಿಸುತ್ತಾರೆ.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ಭಕ್ತಿ, ಕರುಣೆ, ವೀರ, ರೌದ್ರ, ಶೃಂಗಾರ ರಸಗಳಲ್ಲಿ ಪ್ರಾವೀಣ್ಯತೆ ಮೆರೆದು ಮರೆಯಾದ ಕೆರೆಮನೆ ಮಹಾಬಲ ಹೆಗಡೆಯವರು ಕೊಟ್ಟುಹೋಗಿದ್ದಾರೆ ಅವರಪಾತ್ರಗಳ ನೆನಪನ್ನು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X