ಬಿಜೆಪಿ ಸರಕಾರಕ್ಕೆ ಬೆಂಬಲ ಇಲ್ಲ : ಎಚ್ಡಿಕೆ

ಬಿಜೆಪಿಯಲ್ಲಿ ಎದ್ದಿರುವ ಭಿನ್ನಾಭಿಪ್ರಾಯ ಮುಂದುವರೆದಿದ್ದು, ಸರಕಾರ ಪತನಗೊಳ್ಳುವ ಎಲ್ಲ ಲಕ್ಷಣಗಳೂ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಡೆ ಇದೀಗ ಅತಿ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ರೆಡ್ಡಿ ಬೆಂಬಲಿಗರು ಪಕ್ಷದಿಂದ ಹೊರನಡೆದರೆ, ಜೆಡಿಎಸ್ ಸಹಕಾರ ಪಡೆದುಕೊಳ್ಳುವ ಚಿಂತನೆಯಲ್ಲಿ ಯಡಿಯೂರಪ್ಪ ಇದ್ದಾರೆ ಎನ್ನುವ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಈವರೆಗೂ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಮಾತುಕತೆಯೂ ನಡೆದಿಲ್ಲ. ಬೆಂಬಲ ನೀಡುವಂತ ವಿಷಯಗಳು ಪಕ್ಷದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಬಿಜೆಪಿಯ ಕೆಲ ನಾಯಕರು ಅವರವರ ಅನುಕೂಲಕ್ಕೆ ತಕ್ಕಂತೆ ನಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ರಾಜಕೀಯ ಬಿಕ್ಕಟ್ಟು ಮತ್ತು ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಬಗ್ಗೆ ಚರ್ಚಿಸಲು ನಾಳೆ (ಶುಕ್ರವಾರ) ಜೆಡಿಎಸ್ ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications