ಕರ್ನಾಟಕದಲ್ಲಿ ಆಂಧ್ರ ಸಿಎಂ ರೋಸಯ್ಯ
ಬೆಂಗಳೂರು, ಅ. 23 : ನೆರೆ ಪೀಡಿತ ಪ್ರದೇಶಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ಪಡೆಯುವುದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಕೆ ರೋಸಯ್ಯ ಇಂದು ಬೆಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದರು. ವಿಧಾನಸೌಧಕ್ಕೆ ಆಗಮಿಸಿದ ರೋಸಯ್ಯ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಸಂಪುಟದ ಸಹದ್ಯೋಗಿಗಳು ಅತ್ಮೀಯವಾಗಿ ಬರಮಾಡಿಕೊಂಡಿರು.
ಮುಖ್ಯಮಂತ್ರಿಯಾದ ನಂತರ ಇದೇ ಪ್ರಥಮ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿರುವ ರೋಸಯ್ಯ ಅವರನ್ನು ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಗೃಹ ಸಚಿವ ವಿ ಎಸ್ ಆಚಾರ್ಯ, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಸ್ವಾಗತಿಸಿದರು. ನಂತರ ರೋಸಯ್ಯ ಅವರನ್ನು ಮುಖ್ಯಮಂತ್ರಿಗಳ ಕೊಠಡಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೋಸಯ್ಯ ಅವರಿಗೆ ಮೈಸೂರು ಪೇಟ ತೋಡಿಸಿ ಗೌರವಿಸಿದರು.
ಕನ್ನಡದ ಮೇರು ಕವಿ ಸಂತ ಸರ್ವಜ್ಞ ಮತ್ತು ತಮಿಳರ ಆರಾಧ್ಯ ತಿರುವಳ್ಳುವರ್ ಪ್ರತಿಮೆಗಳ ಅನಾವರಣ ವಿನಿಮಯ ಮಾಡಿಕೊಳ್ಳುವ ಮೂಲಕ ಕರ್ನಾಟಕ-ತಮಿಳುನಾಡು ಬಾಂಧವ್ಯಕ್ಕೆ ಯಡಿಯೂರಪ್ಪ ಮೇಲ್ಪಂಕ್ತಿ ಹಾಕಿದ್ದರು. ಇದರ ಬೆನ್ನಲ್ಲೇ ಆಂಧ್ರ ಸಿಎಂ ರೋಸಯ್ಯ ಇಂದು ಭೇಟಿ ನೀಡುತ್ತಿರುವುದು ಉಭಯ ರಾಜ್ಯಗಳ ಸೌಹಾರ್ಧ ಬೆಸುಗೆಯ ಕೊಂಡಿಯಾಗಿದೆ.
ರಾಜ್ಯದ ಗಡಿ ಪ್ರದೇಶದಲ್ಲಿ ಆಂಧ್ರ ಪ್ರದೇಶ ಅಕ್ರಮ ನೀರಾವರಿ ಕಾಮಗಾರಿಗಳನ್ನು ನಡೆಸುವುದು. ಆಲಮಟ್ಟಿ ಡ್ಯಾಂ ಎತ್ತರಿಸುವ ವಿಷಯ ಸೇರಿದಂತೆ ಎರಡೂ ರಾಜ್ಯಗಳ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾಗಿರುವುದು ತಿಳಿದಿರುವ ಸಂಗತಿ. ರೋಸಯ್ಯ ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಅಶಯವಂತೂ ಖಂಡಿತಾ ಮೂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೋಸಯ್ಯ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ನಾಶವಾಗಿರುವ ಕೇಂದ್ರದ ಗಮನಕ್ಕೆ ಬಂದಿದೆ. ಇತ್ತೀಚೆಗೆ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದಾಗ ಎರಡೂ ರಾಜ್ಯಗಳಿಗೆ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. ಕರ್ನಾಟಕ ಮತ್ತು ಆಂಧ್ರ ಸರಕಾರಗಳು ಸೇರಿ ಮಂತ್ರಾಲಯವನ್ನು ಸಂಪರ್ಕಿಸುವ ಸೇತುವೆಯನ್ನು ನಿರ್ಮಿಸುವ ಭರವಸೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications