ನೆರೆ ಹಾವಳಿ : ಯಡಿಯೂರಪ್ಪ ವೈಮಾನಿಕ ಸಮೀಕ್ಷೆ

BS Yeddyurappa
ಬೆಂಗಳೂರು, ಅ. 3 : ಅತಿವೃಷ್ಟಿಯಿಂದ ಸಂಪೂರ್ಣ ತತ್ತರಿಸಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶನಿವಾರ ಕೈಗೊಂಡರು. ಸಮೀಕ್ಷೆಯನ್ನು ಭಾನುವಾರ ಇಟ್ಟುಕೊಳ್ಳುವ ಕಾರ್ಯಕ್ರಮ ಮುಖ್ಯಮಂತ್ರಿಗಳು ಇಟ್ಟುಕೊಂಡಿದ್ದರು. ಆದರೆ, ನೆರೆ ಸಂತ್ರಸ್ತರ ಆರ್ತನಾದ ಮುಗಿಲು ಮುಟ್ಟಿದ್ದರಿಂದ ಶನಿವಾರದ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಿ ಕರುಣಾಕರ ರೆಡ್ಡಿ ಜತೆಗೂಡಿ ಇಂದೇ ಸಮೀಕ್ಷೆ ಕೈಗೊಂಡರು.

ನಂತರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅತಿವೃಷ್ಟಿಯಲ್ಲಿ 100 ಜನ ಸತ್ತಿದ್ದಾರೆ. ಪ್ರವಾಹದಲ್ಲಿ ಸತ್ತವರ ಖಚಿತವಾದ ಅಂಕಿಸಂಖ್ಯೆ ಸಿಗಬೇಕಾಗಿದೆ. ಮನೆಮಠ, ಜಾನುವಾರು ಕಳೆದುಕೊಂಡವರ ಲೆಕ್ಕ ಸಿಗದಂತಾಗಿದೆ. ಎಲ್ಲಾ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಸಂತ್ರಸ್ತರಿಗೆ ಮನೆಮಠ ಕಟ್ಟಿಕೊಡಲಾಗುವುದು, ರಸ್ತೆ, ಸೇತುವೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು. ಮಾಧ್ಯಮಗಳ ವರದಿಯ ಪ್ರಕಾರ, ಪ್ರವಾಹದಲ್ಲಿ ಸಿಲುಕಿ ಸತ್ತವರ ಸಂಖ್ಯೆ ಶನಿವಾರ 150ರ ಗಡಿ ದಾಟಿದೆ.

ತುರ್ತು ಪರಿಹಾರ ಕಾರ್ಯಕ್ಕಾಗಿ ಈಗಾಗಲೇ 105 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಹಣವನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡುತ್ತಿರುವ ಕೇಂದ್ರ ಮತ್ತು ಆಂಧ್ರದ ತಂಡವನ್ನು ಅವರು ಶ್ಲಾಘಿಸಿದರು. ನೆರೆಯಲ್ಲಿ ಸಿಲುಕಿಕೊಂಡಿರುವ ಎಲ್ಲರನ್ನೂ ಕೇಂದ್ರದ ಸಹಾಯದಿಂದ ರಕ್ಷಿಸಲಾಗುವುದು. ಜನ ನಿರಾತಂಕವಾಗಿರಬೇಕೆಂದು ಅವರು ನುಡಿದರು.

ಮಂತ್ರಾಲಯದ ದೇವಸ್ಥಾನ ವಿಮಾನದ ಮುಖಾಂತರ ವೀಕ್ಷಿಸಿದ ಅವರು, ತಾವು ಕೂಡ ರಾಯ ಭಕ್ತರಾಗಿದ್ದು, ಸಂಪೂರ್ಣ ಹಾಳಾಗಿರುವ ದೇವಸ್ಥಾನದ ಜೀರ್ಣೋದ್ಧಾರಕ್ಕೆ 10 ಕೋಟಿ ರು. ಮೊದಲನೇ ಕಂತು ತಕ್ಷಣ ಬಿಡುಗಡೆ ಮಾಡುವುದಾಗಿ ವಾಗ್ದಾನ ನೀಡಿದರು. ರಾಘವೇಂದ್ರ ಸ್ವಾಮಿ ದೇವಸ್ಥಾನದ ಮೇಲೆಯೇ ಸುಮಾರು 300ಕ್ಕೂ ಹೆಚ್ಚಿನ ಭಕ್ತರು ರಕ್ಷಣೆ ಮತ್ತು ಪರಿಹಾರಕ್ಕಾಗಿ ಎದಿರುನೋಡುತ್ತಿದ್ದಾರೆ. ಮಠದ ಸುಯತೀಂದ್ರ ಸ್ವಾಮೀಜಿಯವರನ್ನು ಶೋಭಾ ಕರಂದ್ಲಾಜೆ ಅವರು ಖುದ್ದಾಗಿ ಬಂದು ಶುಕ್ರವಾರವೇ ಹೆಲಿಕಾಪ್ಟರ್ ಮುಖಾಂತರ ರಾಯಚೂರಿಗೆ ಕರೆದೊಯ್ದಿದ್ದರು.

ಮಂತ್ರಾಲಯದಲ್ಲಿ ಸ್ವಾಮಿಗಳನ್ನು ಮಾತ್ರ ಕರೆದೊಯ್ದರು. ಆದರೆ, ಅಲ್ಲಿಯೇ ಇದ್ದ ನೂರಾರು ಭಕ್ತರನ್ನು ರಾಜ್ಯ ಸರಕಾರ ಕಡೆಗಣಿಸಿದೆ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಡಿಸಿದ್ದಾರೆ. ಅಲ್ಲಲ್ಲಿ ಆಹಾರ ಪೊಟ್ಟಣಗಳನ್ನು ಬಿಸಾಡಲಾಗಿದ್ದರೂ ತೊಟ್ಟು ನೀರನ್ನೂ ಕೊಟ್ಟಿಲ್ಲ, ಜನರ ಬಗ್ಗೆ ಸರಕಾರ ತಲೆಕೆಡಿಸಿಕೊಂಡಿಯೇ ಇಲ್ಲ ಎಂದು ಕೆಲವರು ಅಲವತ್ತುಕೊಂಡಿದ್ದಾರೆ.

ಕಾರವಾರದಲ್ಲಿ ಕುಸಿದ ಗುಡ್ಡ : ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಮುಂದುವರಿದಿದೆ. ಇಲ್ಲಿನ ಕಡುವಾಡ ಎಂಬ ಗ್ರಾಮದಲ್ಲಿ ಗುಡ್ಡವೊಂದು ಕುಸಿದುಬಿದ್ದಿದೆ. ಅಡಿಯಲ್ಲಿದ್ದ ಮನೆಗಳು ನೆಲಸಮವಾಗಿವೆ ಎಂದು ತಿಳಿದುಬಂದಿದೆ. ಕುಸಿದ ಮಣ್ಣಿನಡಿಯಲ್ಲಿ 20ಕ್ಕೂ ಹೆಚ್ಚು ಜನ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ 3 ಜನರ ಶವವನ್ನು ಹೊರತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಜನರ ರಕ್ಷಣಾ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+