ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕೋಣ ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ

By Staff
|
Google Oneindia Kannada News

Karwar
ಕಾರವಾರ, ಜು. 30 : ಇಲ್ಲಿಗೆ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಯೋಜನೆಯನ್ನು ಗುತ್ತಿಗೆ ಪಡೆದ ಕಂಪನಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿದ್ದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಉದ್ರಿಕ್ತಗೊಂಡ ಗ್ರಾಮಸ್ಥರು ಕೈಗಾಕ್ಕೆ ಸೇರಿದ ಬಸ್ ಗೆ ಬೆಂಕಿ ಹಚ್ಚಿದ್ದು, ಎರಡು ಬಸ್ ಗಳನ್ನು ಜಖಂಗೊಳಿಸಲಾಗಿದೆ. ಇಬ್ಬರು ಪೊಲೀಸರು ಸೇರಿ ಸುಮಾರು 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಹಣಕೋಣದಲ್ಲಿ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿದ್ದು, ಸ್ಥಾವರ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಸರ ನಾಶದ ಜೊತೆಗೆ ಫಲವತ್ತಾದ ಭೂಮಿ ಹಾಳಾಗಲಿದೆ ಎನ್ನುವ ಏಕೈಕ ಕಾರಣದಿಂದ ಗ್ರಾಮಸ್ಥರು ಈ ಸ್ಥಾವರ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ಸ್ಥಾವರ ನಿರ್ಮಾಣಕ್ಕೆ ಇಂಡ್ ಭಾರತ್ ಎಂಬ ಖಾಸಗಿ ಕಂಪನಿ ಯೋಜನೆಯ ಗುತ್ತಿಗೆ ಪಡೆದಿತ್ತು.

ಗ್ರಾಮ ಪಂಚಾಯಿತಿ ಅನುಮತಿ ಪಡಿಯದೆ ಶೆಡ್ ನಿರ್ಮಾಣ ಮಾಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂದು ಸ್ಥಾವರ ಪ್ರದೇಶಕ್ಕೆ ತೆರಳಿ ಶೆಡ್ ಧ್ವಂಸಕ್ಕೆ ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಗ್ರಾಮಸ್ಥರ ಮಾತಿನ ಚಕಮಕಿ ನಡೆಯಿತು. ಆಗ ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಪ್ರಹಾರ ನಡೆಸಿದರು. ಆಗ ಉದ್ರಿಕ್ತಗೊಂಡ ಜನ ಕೈಗಾಗೆ ಸಂಬಂಧಿಸಿದ ಬಸ್ ಬೆಂಕಿ ಹಚ್ಚಿದ್ದಾರೆ. ಎರಡು ಕೆಎಸ್ ಆರ್ ಟಿಸಿ ಬಸ್ ಗೆ ಜಖಂಗೊಳಿಸಲಾಗಿದೆ. ವಾತಾವರಣ ಬಿಗುವುನಿಂದ ಕೂಡಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಮಪಂಚಾಯಿತಿ ಅನುಮತಿ ಪಡೆಯುವುದು ಕಾನೂನು. ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಸ್ಥಾವರ ಪ್ರದೇಶದ ನಿರ್ಮಿಸಲಾಗಿದ್ದ ಶೆಡ್ ನ್ನು ತೆಗೆಯಬೇಕಿತ್ತು. ಆದರೆ, ಗ್ರಾಮಸ್ಥರು ಶೆಡ್ ಧ್ವಂಸ ಮಾಡುವುದು ಸರಿಯಲ್ಲ. ಅದು ಕಾನೂನು ವಿರೋಧಿ ಕ್ರಮ ಎಂದು ಕಾರವಾರ ಜಿಲ್ಲಾಧಿಕಾರಿ ಚೆನ್ನಪ್ಪಗೌಡ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X