ಭ್ರಷ್ಟಾಚಾರ ಮುಕ್ತ ರಾಜ್ಯಕ್ಕಾಗಿ ಹೋರಾಟ : ಜಾಣಗೆರೆ
ಶಿವಮೊಗ್ಗ, ಜು. 25 : ಕನ್ನಡ ನಾಡಿನ ಪರ ಹೋರಾಟ ಮಾಡುವ ಹಾಗೂ ಹೊಸದೊಂದು ಚಳವಳಿಗೆ ರೂಪ ನೀಡುವ ಉದ್ದೇಶದಿಂದ ಎನ್.ಮುತ್ತಪ್ಪ ರೈರವರ ಜಯ ಕರ್ನಾಟಕ ಸಂಸ್ಥೆ ಹುಟ್ಟಿಕೊಂಡಿದ್ದು, ಈ ಸಂಸ್ಥೆಯ ಮೂಲಕ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಸಂಘಟನೆಯ ಉದ್ದೇಶ ಹಣ, ಆಸ್ತಿ ಮಾಡುವುದಲ್ಲ. ಕರ್ನಾಟಕದ ಪರ ಕೆಲಸ ಮಾಡುವುದು ಎಂದು ಜಯ ಕರ್ನಾಟಕ ಸಂಸ್ಥೆಯ ನಿಯೋಜಿತ ರಾಜ್ಯಾಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ಶನಿವಾರ ಬೆಳಿಗ್ಗೆ ಜ್ಯೂಯಲ್‌ರಾಕ್ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸಂಸ್ಥೆಯ ಉದ್ದೇಶ ಸಂಘಟನೆ ಕಟ್ಟುವುದು. ನಾಡಿಗೆ, ಜನತೆಗೆ ಸೇವೆ ಮಾಡುವುದು. ನಾಡಿನ ಪರ ಚಳವಳಿಗೆ ಹೊಸ ರೂಪ ನೀಡುವುದು ಎಂದು ವಿವರಿಸಿದರು.
ಕಳೆದ ಆರು ದಿನಗಳಲ್ಲಿ 13 ಜಿಲ್ಲೆಗಳನ್ನು ಸುತ್ತಿ ಬಂದಿದ್ದೇನೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅತಂತ್ರ ಸ್ಥಿತಿ ಇದೆ. ಭ್ರಷ್ಟತೆ ತಾಂಡವವಾಡುತ್ತಿದೆ. ಸಂದಿಗ್ಧ ಸ್ಥಿತಿಯಲ್ಲಿ ಕರ್ನಾಟಕದ ಜನರಿದ್ದಾರೆ. ಇದೆಲ್ಲಾ ಸಮಸ್ಯೆಗಳನ್ನು ಹೋರಾಟದಿಂದ ಮಾತ್ರ ಬಗೆಹರಿಸಲು ಸಾಧ್ಯ. ಈ ಹಿಂದೆಯೂ ಸಾಕಷ್ಟು ಚಳವಳಿಗಳು ನಡೆದಿವೆ. ದೊಡ್ಡ ದೊಡ್ಡ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದೇನೆ. ನಾಡಿನ ಪರ ಹೋರಾಡಿದ್ದೇನೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ ಸಾಕಷ್ಟು ಅನುಭವವೂ ಇದೆ. ಸಾಹಿತ್ಯದಲ್ಲೂ ಗುರುತಿಸಿಕೊಂಡಿದ್ದೇನೆ. ಮೊದಮೊದಲಿಗೆ ಮುತ್ತಪ್ಪ ರೈ ಬಗ್ಗೆ ಕುತೂಹಲ ಮತ್ತು ಅನುಮಾನ ಎರಡೂ ಇತ್ತು. ಅವರೊಂದಿಗೆ ಸೇರಿ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುವುದೇ ಸಂಸ್ಥೆಯ ಗುರಿ ಎಂದು ವಿವರಿಸಿದರು.
ಶಿವಮೊಗ್ಗದಲ್ಲಿಯೂ ಸಾಮರ್ಥ್ಯವಿರುವ ತಂಡ ಕಟ್ಟಿದ್ದೇವೆ. ಶಿವಮೊಗ್ಗದ ಮೇಲೆ ನನಗೆ ವಿಶೇಷ ಪ್ರೀತಿ. ಪತ್ರಿಕೋದ್ಯಮದಲ್ಲಿದ್ದಾಗ ಬಹಳಷ್ಟು ಮೊಕದ್ದಮೆಗಳನ್ನು ಶಿವಮೊಗ್ಗದ ಜನರಿಂದ ಹಾಕಿಸಿಕೊಂಡಿದ್ದೇನೆ. ಹೋರಾಟದ ನೆಲವಾದ ಶಿವಮೊಗ್ಗದಲ್ಲಿ ಜಯ ಕರ್ನಾಟಕ ಸಂಸ್ಥೆಗೆ ಅತ್ಯುತ್ತಮ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.
ಈಗಾಗಲೇ ಕರ್ನಾಟಕದಾದ್ಯಂತ ಜಯ ಕರ್ನಾಟಕ ಸಂಸ್ಥೆಯನ್ನು ಬಲಿಷ್ಠಗೊಳಿಸಲು ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ. ಈಗ ತಾಲ್ಲೂಕು ಸಮಿತಿಗಳನ್ನು ರಚಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಕಾಶ್ ರೈ, ಸಂಘಟನಾ ಕಾರ್ಯದರ್ಶಿ ರಾಧಾ ಕೃಷ್ಣನ್, ಅಶೋಕ್ ಕುಮಾರ್, ರಾಮಚಂದ್ರ, ಕೆ.ಎನ್.ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications