ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಗ ಜಲಧಾರೆಯಲ್ಲಿ ಸೊಬಗಿನ ಸಾಕ್ಷಾತ್ಕಾರ

By Staff
|
Google Oneindia Kannada News

Jog falls in Shivamogga district
ಮುಂಗಾರು ಪ್ರಾರಂಭವಾದಾಗ ಕಣ್ಣಾಮುಚ್ಚಾಲೆಯಾಡಿ ಕಾಡಿಸಿದ್ದ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ರೌದ್ರನರ್ತನವನ್ನು ಪ್ರಾರಂಭಿಸಿದೆ. ಇದರಿಂದ ಸ್ಥಳೀಯರು ಶಪಿಸುವಂತಾದರೂ ಪ್ರವಾಸಿಗರಿಗೆ ಹಬ್ಬವನ್ನುಂಟು ಮಾಡಿದೆ. ಮಳೆಯಿಲ್ಲದೆ ಸೊರಗಿದ್ದ ಜೋಗ ಈಗ ಭೋರ್ಗರೆಯುತ್ತ ಧುಮುಕುತ್ತಿದೆ. ಅದರ ಸೌಂದರ್ಯವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ.

* ಶಿಜು ಪಾಶಾ, ಶಿವಮೊಗ್ಗ

ಇಂಡಿಯನ್ ನಯಾಗರ ಎಂದೇ ಜಗತ್ಪ್ರಸಿದ್ಧವಾಗಿರುವ ಜಗದ್ವಿಖ್ಯಾತ ಜೋಗ ಜಲಪಾತದ ನಯನ ಮನೋಹರ ದೃಶ್ಯಗಳನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. 829 ಅಡಿ ಎತ್ತರದಿಂದ ಕೆಳಕ್ಕೆ ಧುಮುಕುವ ಶರಾವತಿ ನದಿಯ ನಾಲ್ಕು ಜಲಧಾರೆಗಳನ್ನು ನೋಡುವುದೇ ಒಂದು ರೋಮಾಂಚನ ದೃಶ್ಯ. ಶರಾವತಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಜಲಪಾತ ಮೈದುಂಬಿಕೊಂಡು ಧುಮುಕುತ್ತಿದೆ.

1550 ಅಡಿ ಅಗಲದ ಈ ಜೋಗ ಜಲಪಾತವು ಸೆಕೆಂಡ್ ಒಂದಕ್ಕೆ ಅಂದಾಜು 5387 ಕ್ಯುಬಿಕ್ ಅಡಿಯಷ್ಟು ವೇಗವಾಗಿ ಧುಮುಕುತ್ತದೆ. ಈ ಜಲಪಾತದ ಈವರೆಗಿನ ದಾಖಲಾದ ಅತಿ ಹೆಚ್ಚು ಧುಮುಕುವ ವೇಗವೆಂದರೆ ಸೆಕೆಂಡ್ ಒಂದಕ್ಕೆ 1.20 ಲಕ್ಷ ಕ್ಯುಬಿಕ್ ಅಡಿ. ಗೇರುಸೊಪ್ಪದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ಈ ಜೋಗ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಖುಷಿ. ಏಷಿಯಾ ಖಂಡದಲ್ಲಿಯೇ ಅತಿ ಆಳದ ಜಲಪಾತವೆಂದು ಇದನ್ನು ಗುರುತಿಸಲಾಗಿದೆ.

ಮೂಲದಲ್ಲಿ ಗೇರುಸೊಪ್ಪ ಜಲಪಾತವೆಂದೇ ಕರೆಯಲ್ಪಡುತ್ತಿದ್ದ ಜೋಗ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಸುಮಾರು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮುಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮುಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳ ಮುಖಾಂತರ ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗ ಗಳಾಗಿವೆ.

ಮಳೆಗಾಲದಲ್ಲಿ ಅತ್ಯಂತ ರಮಣೀಯ ರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ತಣಿಸುತ್ತಲೇ ಇರುತ್ತದೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ.

ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ : ಈ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ ಎಂತಹ ವ್ಯರ್ಥ ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗರ.

1930ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೋಗಿ ಇಲಾಖೆಯಿಂದ ಜಲ ವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ 1939ರಲ್ಲಿ ಜೋಗ ಜಲಪಾತದಿಂದ 24 ಕಿ.ಮೀ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತ್ತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆಯೆಂದು ನಾಮಕರಣ ಮಾಡಲಾಯಿತು.

ಫೆಬ್ರವರಿ 21, 1949ರಲ್ಲಿ ಉದ್ಘಾಟನೆ ಯಾದ ಈ ವಿದ್ಯುತ್ ಸ್ಥಾವರ 120 ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೋಜನೆಗೆ ನೀರಿನ ಸರಬರಾಜಾಗುತ್ತಿತ್ತು, 60ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೇ ಈ ಯೋಜನೆಗೆ ನೀರಿನ ಮೂಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X