ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಕೋಮುದುಷ್ಟ ಶಕ್ತಿಗಳಿಗೆ ಮಟ್ಟ

By Staff
|
Google Oneindia Kannada News

Shobha Karandlaje
ಮೈಸೂರು, ಜು. 9 :ಮೈಸೂರು ನಗರದಲ್ಲಿ ನಡೆದ ಕೋಮು ಗಲಭೆಗಳ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಶಾಂತಿ ಕದಡುವ ಶಕ್ತಿಗಳ ವಿರುದ್ಧ ಸರ್ಕಾರ ಕೈಗೊಂಡು ಕೆಲವು ಕಠಿಣ ಕ್ರಮಗಳ ಫಲವಾಗಿ ದೊಡ್ಡ ಪ್ರಮಾಣದಲ್ಲಿ ಗಲಭೆಯಾಗುವುದನ್ನು ನಿಯಂತ್ರಿಸಲಾಗಿದೆ. ಇದರೊಟ್ಟಿಗೆ, ಸಂಬಂಧಿಸಿದವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ತಿಳಿಸಿದರು.

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಯಿಂದ ಗಾಯಗೊಂಡವರನ್ನು ಭೇಟಿ ಮಾಡಲು ನಗರದ ಅಪೋಲೋ ಆಸ್ಪತ್ರೆ, ಕೃಷ್ಣರಾಜೇಂದ್ರ ಆಸ್ಪತ್ರೆ, ವಿಕ್ರಂ ಆಸ್ಪತ್ರೆ ಹಾಗೂ ಬೀಬಿ ಆಯಿಷ ಆಸ್ಪತ್ರೆಗಳಿಗೆ ಅವರು ಬುಧವಾರ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದರು.

ಇತ್ತೀಚೆಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋಮು ಗಲಭೆ ನಡೆದಿತ್ತು. ಆ ವೇಳೆಯಲ್ಲಿ ಚುನಾವಣೆ ಇದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿತ್ತು. ಎರಡನೇ ಬಾರಿ ಪ್ರಕರಣ ಮರುಕಳಿಸಿದೆ. ಕೋಮು ಗಲಭೆಗಳನ್ನು ಸೃಷ್ಠಿ ಮಾಡಿದ್ದಾರೆ. ಈ ಗಲಭೆ ಹಿಂದಿರುವ ಶಕ್ತಿಗಳನ್ನು ಸರ್ಕಾರ ಯಾವುದೇ ಮುಲಾಜಿಲ್ಲದೆ ಬಗ್ಗುಬಡಿಯಲಿದೆ ಎಂದು ಸಚಿವೆ ಕರಂದ್ಲಾಜೆ ಹೇಳಿದರು.

ಸರ್ಕಾರದ ಉದ್ದೇಶ ಸಾರ್ವಜನಿಕ ಶಾಂತಿ ಸೌಹಾರ್ದಯುತ ವಾತಾವರಣ ನಿರ್ಮಿಸುವುದು. ಇದಕ್ಕೆ ಧಕ್ಕೆ ತರುವ ಯತ್ನ ನಡೆದಿದೆ. ಈಗಿನ ಗಲಭೆಯಲ್ಲಿ ಮೂರು ಸಾವು ಸಂಭವಿಸಿದೆ. ಐದು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 21 ಜನ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಹಾಗೂ ಮೈಸೂರು ನಗರ ಪೋಲೀಸ್ ಆಯುಕ್ತರು ತ್ವರಿತವಾಗಿ ಕಠಿಣ ಕ್ರಮ ಕೈಗೊಂಡ ಫಲವಾಗಿ ಗಲಭೆ ನಿಯಂತ್ರಣ ಯಶಸ್ವಿಯಾಯಿತು ಎಂದು ಸಚಿವರು ಹೇಳಿದರು.

ತಾವು ಅಮೇರಿಕಾದ ಪ್ರವಾಸದಲ್ಲಿದ್ದರೂ ಜಿಲ್ಲಾಡಳಿತದ ಜೊತೆ ಸತತ ಸಂಪರ್ಕದಲ್ಲಿದ್ದು ಕಾಲಕಾಲಕ್ಕೆ ಪೂರ್ಣ ಮಾಹಿತಿ ದೊರಕುತ್ತಿತ್ತು. ವಿದೇಶದಿಂದಲೇ ಮೃತಪಟ್ಟವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದು ಈಗಾಗಲೇ ಪರಿಹಾರದ ಚೆಕ್ ನೀಡಲಾಗಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ. ಮುಖಂಡ ಗಿರಿಧರ್ ಗುಣಮುಖರಾಗುತ್ತಿದ್ದಾರೆ. ನಿನ್ನೆ ಬೆಂಗಳೂರಿನಿಂದ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ತಂಡ ಮೈಸೂರಿಗೆ ಆಗಮಿಸಿ ಗಿರಿಧರ್ ಚಿಕಿತ್ಸೆಗೆ ಸೂಕ್ತ ಸಲಹೆ ನೀಡಿತು. ಇಂದೂ ಸಹ ಚೆನ್ನೈನಿಂದ ತಜ್ಞ ವೈದ್ಯರು ಆಗಮಿಸಿ ಗಿರಿಧರ್ ಅವರ ಆರೋಗ್ಯ ತಪಾಸಣೆ ನಡೆಸಿದರು ಎಂದು ಸಚಿವೆ ಕುಮಾರಿ ಶೋಭ ಕರಂದ್ಲಾಜೆ ಹೇಳಿದರು.

ಈಗಾಗಲೇ ಘಟನಾ ಸ್ಥಳಗಳಿಗೆ ರಾಜ್ಯದ ಗೃಹ ಸಚಿವ ವಿ ಎಸ್ ಆಚಾರ್ಯ ಹಾಗೂ ರಾಜ್ಯ ಪೋಲೀಸ್ ಇಲಾಖೆ ಮುಖ್ಯಸ್ಥ ಡಿಜಿಪಿ ಶ್ರೀ ಅಜಯ್ ಕುಮಾರ್ ಸಿಂಗ್ ಭೇಟಿ ನೀಡಿ ಪೂರ್ಣ ಪರಿಶೀಲನೆ ನಡೆಸಿದ್ದಾರೆ. ಕಳೆದ ಬಾರಿ ಗಲಭೆಯಾದಾಗ ಹಾನಿಗೊಳಗಾದ ಪ್ರಾರ್ಥನಾ ಮಂದಿರಗಳಿಗೆ ಪರಿಹಾರ ನೀಡಿದೆ. ಅಲ್ಲದೆ ಹಾನಿಗೊಳಗಾದ 30 ಮನೆಗಳಿಗೆ ಪರಿಹಾರ ನೀಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ನಗರದ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಜಿಲ್ಲಾಡಳಿತ ಹಾಗೂ ಪೋಲೀಸರಿಗೆ ನೆರವಾಗುವಂತೆ ಸಚಿವೆ ಶೋಭ ಕರಂದ್ಲಾಜೆ ಮನವಿ ಮಾಡಿದರು.

ಸಚಿವರೊಂದಿಗೆ ಮೈಸೂರು ನಗರದ ಪೋಲೀಸ್ ಆಯುಕ್ತ ಸುನೀಲ್ ಅಗರವಾಲ್, ಜಿಲ್ಲಾಧಿಕಾರಿ ಪಿ ಮಣಿವಣ್ಣನ್, ವಾರ್ತಾ ಇಲಾಖೆ ಉಪನಿರ್ದೇಶಕ ಎ ಆರ್ ಪ್ರಕಾಶ್ ಇದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X