ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ವಿಫಲ

ಶಿವಮೊಗ್ಗ, ಜು.1 : ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಉದ್ಯೋಗ ಖಾತರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಕಾಗೋಡು ತಿಮ್ಮಪ್ಪ ಎಚ್ಚರಿಸಿದ್ದಾರೆ.

ಬುಧವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಳೆದ ವರ್ಷವೂ ಸಹ ಉದ್ಯೋಗ ಖಾತರಿ ಯೋಜನೆ ವಿಫಲಗೊಂಡಿತ್ತು. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಈ ಹಣವನ್ನು ಖರ್ಚು ಮಾಡದೆ ಇಡೀ ಯೋಜನೆಯನ್ನೇ ಸಾರ್ವಜನಿಕರಿಂದ ದೂರ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಕಳೆದ ವರ್ಷ ಜಿಲ್ಲೆಯ 267 ಗ್ರಾ.ಪಂ.ಗಳಲ್ಲಿ 1,58,557 ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದವು. ಇದರಲ್ಲಿ 1,57,255 ಕುಟುಂಬಗಳು ಉದ್ಯೋಗ ಚೀಟಿಯನ್ನು ಪಡೆದಿದ್ದವು. ಕಳೆದ ವರ್ಷದ ಕ್ರಿಯಾ ಯೋಜನೆಯಲ್ಲಿ 20,131 ಕಾಮಗಾರಿಗಳನ್ನು ಗುರುತಿಸಲಾಗಿತ್ತು. ಇದಕ್ಕೆ 138.42 ಕೋಟಿ ರೂ.ಗಳ ಮೊತ್ತವನ್ನು ಅಂದಾಜು ಮಾಡಲಾಗಿತ್ತು. ಅಲ್ಲದೆ, 27.94 ಕೋಟಿ ಅನುದಾನವೂ ಸಹ ಬಿಡುಗಡೆಯಾಗಿತ್ತು. ಈ ಹಣದಲ್ಲಿ 12.84 ಕೋಟಿ ರೂ.ಗಳಷ್ಟೇ ಖರ್ಚಾಗಿತ್ತು. ಕಳೆದ ವರ್ಷವೇ ಕೇಂದ್ರ ಸರ್ಕಾರದಿಂದ 168 ಕೋಟಿ ರೂ.ಗಳನ್ನು ಈ ಯೋಜನೆಗೆ ಪಡೆಯುವುದಕ್ಕೆ ಅವಕಾಶವಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿವಲಯ ಯೋಜನೆಯನ್ನು ನಿರ್ಲಕ್ಷ್ಯಿಸಿದ್ದರಿಂದ ವಿಫಲಗೊಂಡಿತ್ತು ಎಂದು ಕಾಗೋಡು ತಿಮ್ಮಪ್ಪ ವಿವರಿಸಿದರು.

ಈ ವರ್ಷ ಜೂನ್‌ವರೆಗೆ 1.58 ಲಕ್ಷ ಕುಟುಂಬಗಳು ಉದ್ಯೋಗ ಖಾತ್ರಿಗಾಗಿ ನೊಂದಾಯಿಸಲ್ಪಟ್ಟಿವೆ. ಜಿಲ್ಲಾ ಪಂಚಾಯತ್ ಜೂನ್‌ವರೆಗೆ 2 ಕೋಟಿ ರೂ.ಗಳನ್ನಷ್ಟೇ ಖರ್ಚು ಮಾಡಿದೆ. ಇದೇ ಆಮೆವೇಗವನ್ನು ಉಳಿಸಿಕೊಂಡರೆ, ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ವಿಫಲಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯವರೇ ಆಗಿದ್ದು, ಈ ಜಿಲ್ಲೆಯ ಉಸ್ತುವಾರಿ ಸಚಿವರೂ ಸಹ ಅವರೇ ಆಗಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಬೊಬ್ಬೆ ಹಾಕುತ್ತಾರೆ. ಆದರೆ, ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕಾಗಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಅಧಿಕಾರಿವಲಯ ಸಹ ಸಂಪೂರ್ಣವಾಗಿ ಗೊಂದಲದಲ್ಲಿದೆ. ಈ ವರೆಗೆ ಗ್ರಾ.ಪಂ. ಮಟ್ಟದಲ್ಲಿ ಉದ್ಯೋಗ ಚೀಟಿ ಪಡೆದವರ ಸಭೆ ಕರೆದಿಲ್ಲ. ಅವರಿಗೆ ಸೂಕ್ತ ರೀತಿಯಲ್ಲಿ ಉದ್ಯೋಗ ಹಂಚುತ್ತಿಲ್ಲ. ಅವರನ್ನು ಗೊಂದಲದಲ್ಲಿಡಲಾಗಿದೆ. ಕೆಲಸ ಮಾಡಿ ಎರಡು-ಮೂರು ತಿಂಗಳಾದರೂ ಸಹ ಹಣ ನೀಡುತ್ತಿಲ್ಲ. ಕಾಮಗಾರಿಗೆ ಬೇಕಾದ ಗುದ್ದಲಿ, ಪಿಕಾಸಿ, ಹಾರೆಗಳನ್ನು ಗ್ರಾಮ ಪಂಚಾಯತಿಯೇ ಖರೀದಿಸಬೇಕು. ಆದರೆ, ಗ್ರಾ.ಪಂ.ನ ಅಧಿಕಾರಿಗಳು ಜನರಿಂದಲೇ ತರಲು ಹೇಳುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ತಾಲ್ಲೂಕ್ ಪಂಚಾಯತ್, ಶಾಸಕರು, ಮುಖ್ಯಮಂತ್ರಿಗಳು ಎಲ್ಲರೂ ಸಹ ವಿಫಲರಾಗಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಖಾರವಾಗಿ ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+