ಶಿವಮೊಗ್ಗ-ತಾಳಗುಪ್ಪ ರೈಲ್ವೇ ಕಾಮಗಾರಿ ಚುರುಕು

ಬಹುದಿನಗಳ ಬೇಡಿಕೆ : ಜಿಲ್ಲೆಯ ಜನತೆಯು ಹಲವು ವರ್ಷಗಳಿಂದ ಶಿವಮೊಗ್ಗ-ತಾಳಗುಪ್ಪ ನಡುವೆ ರೈಲು ಸಂಚಾರ ಆರಂಭಿಸುವಂತೆ ಮತ್ತು ರೈಲು ಮಾರ್ಗವನ್ನು ಬ್ರಾಡ್‌ಗೇಜ್‌ಗೆ ಪರಿವರ್ತನೆ ಮಾಡುವಂತೆ ಸರಕಾರಕ್ಕೆ ವಿವಿಧ ಸಂಘಟನೆಗಳು, ನಾಗರೀಕರು ಹಲವು ಸಲ ಮನವಿ ಮಾಡಿದ್ದರು. ಜೊತೆಗೆ ಇಲ್ಲಿನ ಶಾಸಕರು, ಸಚಿವರುಗಳು, ರಾಜಕೀಯ ಮುಖಂಡರುಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಸರಕಾರದ ಗಮನ ಸೆಳೆಯುವ ಯತ್ನ ಮಾಡಲಾಗಿತ್ತು. ಪರಿಣಾಮ ಈಗ ಕಾಮಗಾರಿಗೆ ಹಸಿರು ನಿಶಾನೆ ದೊರಕಿದ್ದು, ಕಾಮಗಾರಿ ಚುರುಕುಗೊಂಡಿದೆ.
ಯೋಜನಾ ವೆಚ್ಚ ಮತ್ತು ಕಾಮಗಾರಿಯ ಉದ್ದ: ಶಿವಮೊಗ್ಗದಿಂದ ತಾಳಗುಪ್ಪವರೆಗೆ ಸುಮಾರು 98 ಕಿ.ಮೀ ಉದ್ದದ ರೈಲು ಮಾರ್ಗ ಪರಿವರ್ತನಾ ಕಾರ್ಯ ನಡೆಯಬೇಕಿದೆ. ಈಗಾಗಲೇ ಕೆಲಸ ಆರಂಭಗೊಂಡಿದ್ದು, ಆನಂದಪುರದವರೆಗೆ 40ಕಿ. ಮೀ.ನಷ್ಟು ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಹಳಿಗಳ ಜೋಡನಾ ಕಾರ್ಯ ನಡೆಯಬೇಕಿದೆ. ತಾಳಗುಪ್ಪದವರೆಗೆ ಒಟ್ಟು 89 ಕ್ರಾಸಿಂಗ್ ಬರಲಿದ್ದು, 250 ಸೇತುವೆಗಳು ನಿರ್ಮಾಣಗೊಳ್ಳುತ್ತದೆ. ಹಾಗೆಯೇ, ಈ ಯೋಜನೆಯು ಪೂರ್ಣಗೊಳ್ಳಲು ಅಂದಾಜು 300 ಕೋಟಿ ರೂ. ನಿಗದಿಯಾಗಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಪಾಲಿನ ಹಣವನ್ನು ಸಮನಾಗಿ ಬಿಡುಗಡೆ ಮಾಡಲಿವೆ.
ಈ ಕಾಮಗಾರಿಯಿಂದಾಗಿ ಸಾಗರ, ಜೋಗ ಮುಂತಾದ ಊರುಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಪ್ರವಾಸೋದ್ಯಮವನ್ನು ಈ ಮೂಲಕ ಅಭಿವೃದ್ಧಿಗೊಳಿಸಬಹುದಾಗಿದೆ. ಶಿವಮೊಗ್ಗದಿಂದ ಆನಂದಪುರಂವರೆಗಿನ ರೈಲು ಹಳಿ ಜೋಡಣೆ ನಡೆಯಬೇಕಿದೆ. ಮೊದಲ ಹಂತದ ಕಾರ್ಯ ಕೊನೆಗೊಂಡ ನಂತರದಲ್ಲಿ, ಆನಂದಪುರಂನಿಂದ ತಾಳಗುಪ್ಪವರೆಗಿನ ಕಾಮಗಾರಿ ನಡೆಯುವ ನಿರೀಕ್ಷೆ ಇದೆ. ಒಟ್ಟಾರೆ ಯೋಜನೆಯು ಪೂರ್ಣಗೊಳಿಸಲು ಇನ್ನು 1010ರವರೆಗೆ ಕಾಯಬೇಕಾಗಿದೆ. ಹೀಗಾಗಿ ನಿಗದಿತ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೆ, ಉಸ್ತುವಾರಿ ವಹಿಸಿಕೊಂಡಿರುವವರು ಪೂರ್ಣಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು.
ಕೊಂಕಣ ರೈಲ್ವೆಗೆ ಸೇರ್ಪಡೆ? : ಕಾಮಗಾರಿಯು ತಾಳಗುಪ್ಪವರೆಗೆ ಪೂರ್ಣಗೊಂಡ ನಂತರ ಅದನ್ನು ಕೊಂಕಣ ರೈಲ್ವೆಗೆ ಸಂಪರ್ಕ ಕಲ್ಪಿಸಿದರೆ, ಹೆಚ್ಚಿನ ಅನುಕೂಲವಾಗುತ್ತದೆ. ಜೊತೆಗೆ ಪ್ರಮುಖ ನಗರಗಳಿಗೆ ಪ್ರಯಾಣಿಸಲು, ಆ ಮೂಲಕ ವ್ಯಾಪಾರ, ವಾಣಿಜ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯವಾಗುತ್ತದೆ. ಹುಬ್ಬಳ್ಳಿ, ಪೂನಾ, ಗೋವಾ ಮುಂತಾದ ಊರುಗಳಿಗೆ ಇದರಿಂದ ನೇರ ಸಂಪರ್ಕ ಕಲ್ಪಿಸಬಹುದಾಗಿದೆ. ಹೀಗಾಗಿ ಇಲ್ಲಿನ ಸಂಸದರು ರಾಜ್ಯ ಸರಕಾರ, ಕೇಂದ್ರ ಸರಕಾರದ ಮುಂದೆ ಈ ಒಂದು ಯೋಜನೆಯ ಪ್ರಸ್ತಾಪವನ್ನು ಸಲ್ಲಿಸಿ, ಕೇಂದ್ರದ ಮನವೊಲಿಸಿ ಯೋಜನೆಯನ್ನು ಜಾರಿ ಮಾಡಿಸಿದ್ದೇ ಆದರೆ ಜಿಲ್ಲೆಯು ಹೊರರಾಜ್ಯಗಳೊಂದಿಗೆ ಉತ್ತಮ ಸಂಪರ್ಕವಿಟ್ಟುಕೊಳ್ಳಬಹುದಾಗಿದೆ.
ಜೊತೆಗೆ ಇಲ್ಲಿಂದ ಹರಿಹರಕ್ಕೂ ರೈಲ್ವೇ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಹರಿಹರಕ್ಕೆ ನೇರ ಸಂಪರ್ಕ ದೊರೆತರೆ ಪ್ರಯಾಣಿಕರಿಗೆ, ಜೊತೆಗೆ ಪ್ರಮುಖ ನಗರಗಳ ಸಂಪರ್ಕಕಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಯಬೇಕು.
ವರದಿ : ಕೆ. ಮೋಹನ್
ಚಿತ್ರ : ಕೆ.ಆರ್. ಸೋಮನಾಥ್












Click it and Unblock the Notifications