ಜನಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲ : ಡಿಕೆಶಿ

ಬುಧವಾರ ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಸರಿಯಾಗಿಲ್ಲ. ಕರ್ನಾಟಕಕ್ಕೆ ಹೆಚ್ಚಿನ ಶಕ್ತಿ ತುಂಬಲು ಹೈಕಮಾಂಡ್ ನಿರ್ಧರಿಸಿದೆ. ಕರ್ನಾಟಕವನ್ನು ಕಾಂಗ್ರೆಸ್ ಭೂಮಿಯಾಗಿ ಪರಿವರ್ತಿಸುವ ನಿಟ್ಟಿಯಲ್ಲಿ ಚಿಂತನೆ ನಡೆಸಿದೆ. ದೇಶದ ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ಗಳನ್ನು, ಯೋಜನೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರದ ಮೇಲೆ ಮಲತಾಯಿ ಧೋರಣೆಯ ಆರೋಪ ಹೊರಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷನಾಗಿ ಆಯ್ಕೆಯಾದ ಕೂಡಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ಕೊಡಬೇಕೆಂಬ ಉದ್ದೇಶವಿತ್ತು. ಈ ನಡುವೆ ಉಪಚುನಾವಣೆ ಮತ್ತು ಸಂಸತ್ ಚುನಾವಣೆಗಳು ಬಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಈಗ ಸೋನಿಯಾ ಗಾಂಧಿ ಹಾಗೂ ಗುಲಾಮ್ ನಭಿ ಆಜಾದ್‌ರವರ ನಿರ್ದೇಶನದ ಮೇರೆಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್ಸನ್ನು ಬೂತ್ ಮಟ್ಟದಿಂದ ಬಲಪಡಿಸುವ ಕೆಲಸ ಆರಂಭವಾಗಿದೆ. ಬೂತ್, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್ ಮಟ್ಟದಲ್ಲಿ ಸಮಿತಿ ರಚಿಸಿ ಕಾಂಗ್ರೆಸ್‌ಗೆ ಹೊಸ ರೂಪ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಥವಾ ಪದಾಧಿಕಾರಿಗಳು ಯಾರೇ ನಿರ್ಲಕ್ಷ್ಯ ತೋರಿದಲ್ಲಿ ಅಥವಾ ತಿಂಗಳಲ್ಲಿ ಕನಿಷ್ಠ 25 ದಿನ, ದಿನದ 24 ಗಂಟೆ ಕಾಂಗ್ರೆಸ್‌ಗಾಗಿ ದುಡಿಯದಿದ್ದರೆ, ಕೇವಲ ವಿಸಿಟಿಂಗ್ ಕಾರ್ಡ್ ರಾಜಕಾರಣ ಮಾಡುವುದಿದ್ದರೆ ಅಂಥವರನ್ನು ನಿರ್ದಾಕ್ಷಿಣ್ಯವಾಗಿ ಬದಲಾಯಿಸಲಾಗುವುದು. ಹೊಸ ಮುಖಗಳಿಗೆ ಈ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೈಕಲ್ ಕೊಡುವುದೊಂದನ್ನು ಬಿಟ್ಟು ಬೇರೆ ಯಾವ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿಲ್ಲ. ಆದರೆ, ಕೇಂದ್ರದ ಮೇಲೆ ಟೀಕೆ ಮಾಡುವುದನ್ನೂ ಕೈಬಿಟ್ಟಿಲ್ಲ. ಈ ಟೀಕೆಗೆ ಉತ್ತರವಾಗಿ ಕೇಂದ್ರ ಸರ್ಕಾರದ ಅನುದಾನದ ಬಳಕೆ-ಅಪಬಳಕೆ ಕುರಿತು ಪಕ್ಷದಿಂದಲೇ ವೀಕ್ಷಣಾ ತಂಡವನ್ನು ರಚಿಸಲಾಗುವುದು. ಇಡೀ ರಾಜ್ಯದಲ್ಲಿ ಕೇಂದ್ರದ ಸರ್ಕಾರದ ಅನುದಾನದ ಅಪಬಳಕೆಯಾಗುತ್ತಿರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಮ್ಮ ಈಶ್ವರಪ್ಪ : ಎಸ್.ಬಂಗಾರಪ್ಪ ಸೋತಿದ್ದಾರೆ ಎಂದು ಹೇಳಿದವರಾರು? ಅವರು ಇವತ್ತು ಗೆದ್ದಿದ್ದಾರೆ. ಅವರ ಹಿಂದೆ ಸಾವಿರಾರು ಜನ ಕಾರ್ಯಕರ್ತರಿದ್ದಾರೆ. ಬಂಗಾರಪ್ಪ ಸೋತಿದ್ದಾರೆ ಎನ್ನುವವರಿಗೆ ಅವರು ಸೋಲಲು ಕಾರಣವಾದ ಸತ್ಯಗಳು ಗೊತ್ತು. ಬಿಜೆಪಿಯ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಜಗತ್ತಿಗೆ ಆ ಸತ್ಯವನ್ನು ಸಾರಿ ಹೇಳಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಅಭಿನಂದಿಸುತ್ತದೆ. ಅವರು ನಮ್ಮ ಈಶ್ವರಪ್ಪ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಏನೇ ಘಟಿಸಲಿ. ಅದಕ್ಕೆ ಡಿ.ಕೆ.ಶಿವಕುಮಾರ್ ಕಾರಣ ಅಂತಾರೆ. ಪ್ರಶ್ನೆ ಪತ್ರಿಕೆ ಬಯಲಾದ ಹಗರಣಕ್ಕೆ ಸಂಬಂಧಿಸಿದಂತೆ ಮೊದಲೇ ಸೂಚನೆ ನೀಡಿದ್ದೆ. ಆನಂತರದಲ್ಲಿ ಜನರು ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯೊಂದಿಗೆ ಸಾಬೀತು ಮಾಡಿತೋರಿಸಿದ್ದಾರೆ. ಲಿಂಬಾವಳಿಯಂತಹ ಸಚಿವರಿಗೆ ನಾಚಿಕೆಯಾಗಬೇಕು. ಪ್ರಶ್ನೆ ಪತ್ರಿಕೆ ಹಗರಣದಲ್ಲೂ ನನ್ನ ಹೆಸರನ್ನು ಸೇರಿಸಲಾಗಿದೆ. ಈ ಹಗರಣವನ್ನು ನಾನೇ ಮಾಡಿಸಿದೆ ಎಂಬಂತೆ ಬಿಜೆಪಿಯವರು ಕೂಗಾಡುತ್ತಿದ್ದಾರೆ. ಅರವಿಂದ ಲಿಂಬಾವಳಿ ಮನೆಯಲ್ಲಿ ಏನೇ ಘಟಿಸಿದರೂ ಅದು ನನ್ನದೇ ಕೈವಾಡ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಡಿಕೆಶಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಾಲ ಜ್ಯೋತಿಷಿಯೊಬ್ಬರ ಮನೆಗೆ ಭೇಟಿಕೊಟ್ಟ ರಹಸ್ಯವೇನು? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ದಿನನಿತ್ಯ ಹಲವರನ್ನು ಭೇಟಿ ಮಾಡುತ್ತಲೇ ಇರುತ್ತೇನೆ. ನಿಮ್ಮಿಂದಲೂ ಒಂದಿಷ್ಟು ಶಕ್ತಿ ಸಿಗುತ್ತದೆ ಎಂದಾದರೆ, ನಿಮ್ಮನ್ನೂ ಭೇಟಿ ಮಾಡುತ್ತೇನೆ ಎಂದು ಹೇಳಿ, ಗುಪ್ತ ಹೋಮದ ಸುಳಿವನ್ನು ಕೊನೆಗೂ ಗುಪ್ತವಾಗಿಟ್ಟುಕೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶಾಸಕ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯ ಮೀರ್ ಅಜೀಜ್ ಅಹಮದ್, ಮಾಜಿ ಶಾಸಕ ಕರಿಯಣ್ಣ, ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ, ಮುಖಂಡರಾದ ಇಸ್ಮಾಯಿಲ್ ಖಾನ್, ರಮೇಶ್ ಹೆಗಡೆ, ಎನ್.ರಮೇಶ್, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.











Click it and Unblock the Notifications