ಸರೋದ್ ಮಾಂತ್ರಿಕ ಆಲಿ ಅಕ್ಬರ್ ಖಾನ್ ಅಸ್ತಂಗತ

ಭಾರತೀಯ ಕಾಲಮಾನದ ಪ್ರಕಾರ 88 ವರ್ಷದ ಖಾನ್ ಇಂದು ಬೆಳಗ್ಗೆ 10 ಗಂಟೆಗೆ ಅವರ ಸಂಗೀತ ಕೇಂದ್ರದಲ್ಲೇ ಕಣ್ಮುಚ್ಚಿದ್ದಾರೆ. ಈ ವಿಷಯವನ್ನು ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಕಾರ್ಯದರ್ಶಿರಾಬಿನ್ ಪಾಲ್ ತಿಳಿಸಿದರು.
ಅಕ್ಬರ್ ಖಾನ್ ಕುಟುಂಬದ ಗೆಳೆಯರೂ ಆಗಿರುವ ಪಾಲ್, ಖಾನ್ ರ ಸಾವಿನ ಸುದ್ದ್ದಿಯನ್ನು ಕುಟುಂಬಕ್ಕೆ ಮುಟ್ಟಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡದ ತೊಂದರೆಯಿಂದ ಖಾನ್ ಬಳಸುತ್ತಿದ್ದರು. ಡೈಯಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಖಾನ್ ರ ಆರೋಗ್ಯ ಪರಿಸ್ಥಿತಿ ನಾಲ್ಕು ತಿಂಗಳಿಂದ ತೀರಾ ಹದಗೆಟ್ಟಿತ್ತು ಎಂದು ಅವರ ಕಾರ್ಯದರ್ಶಿ ಅಶಿಷ್ ರಾಯ್ ತಿಳಿಸಿದ್ದಾರೆ.
ಖಾನ್ ಅವರ ಸೇವೆಯನ್ನು ಗುರುತಿಸಿದ ಭಾರತ ಸರಕಾರ 1989ರಲ್ಲಿಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿತ್ತು. ಪದ್ಮ ವಿಭೂಷಣ ಪುರಸ್ಕೃತರೂ ಆಗಿರುವ ಖಾನ್ ಭಾರತ ಶಾಸ್ತ್ರೀಯ ಸಂಗೀತವನ್ನು ಐದು ದಶಕಗಳಿಗೂ ಹೆಚ್ಚು ಕಾಲ ಪೋಷಿಸುತ್ತಾ ಬಂದವರು.
ಅಕ್ಬರ್ ಖಾನ್ ಪ್ರಸ್ತುತ ಬಾಂಗ್ಲಾದೇಶದಲ್ಲಿನ ಸಿರ್ಪೂರ್ ಗ್ರಾಮದಲ್ಲಿ 1922ರಲ್ಲಿ ಬಾಬಾ ಆಲಿ ಉದ್ದೀನ್ ಖಾನ್, ಮದೀನಾಬೇಗಂ ದಂಪತಿಗಳಿಗೆ ಜನಿಸಿದ್ದರು. ಬಾಲ್ಯದಿಂದಲೇ ಸರೋದ್ ವಾದ್ಯವನ್ನು ಕಲಿತಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಜೋಧ್ ಪುರ ಸಂಸ್ಥಾನದ ಆಸ್ತಾನ ವಿದ್ವಾಂಸನಾಗಿ ಸ್ಥಾನ ಪಡೆದಿದ್ದರು.
ಪ್ರಪಂಚದಾದ್ಯಂತ ಸಂಗೀತಾಸಕ್ತರನ್ನು ತನ್ನ ಸಂಗೀತ ಕಚೇರಿಗಳ ಮೂಲಕ ಆಕರ್ಷಿಸಿದ್ದರು. 1956ರಲ್ಲಿ ಕೋಲ್ಕತ್ತಾದಲ್ಲಿ ಸಂಗೀತ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಕಾಲಿಫೋರ್ನಿಯಾ, ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸಹ ಅವರು ಸಂಗೀತ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ.
(ಏಜೆನ್ಸೀಸ್)












Click it and Unblock the Notifications