ಯಡಿಯೂರಪ್ಪ ಮೋಸಗಾರ, ವಚನಭ್ರಷ್ಟ
ಬೆಂಗಳೂರು, ಜೂ. 16 : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗಿಂತ ಹಾಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಹಾವಚನ ಭ್ರಷ್ಟ, ದೊಡ್ಡ ಮೋಸಗಾರ. ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವನ್ನು ಬೀಳಿಸುವುದೇ ನನ್ನ ಏಕೈಕ ಗುರಿ. ಇದು ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ ಅವರ ಗುಡುಗು.
ತಮ್ಮನ್ನು ಮಂಡಳಿ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೀಡಿದ್ದ ಬೆಂಬಲವನ್ನು ಹಿಂಪಡೆದಿರುವುದಾಗಿ ಅವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಒಬ್ಬ ರಾಜಕಾರಣಿಯೇ ಅಲ್ಲ ಎಂದು ಆರೋಪಿಸಿದ ಪ್ರಕಾಶ, ಮುಂಬರುವ ಮರುಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಮುಖ್ಯ ಗುರಿ ಎಂದಿದ್ದಾರೆ.
ರಾಜ್ಯದ 224 ಕ್ಷೇತ್ರಗಳಿಗೆ ಪ್ರವಾಸ ಮಾಡಿ ಸರಕಾರದ ವಿರುದ್ಧ ಪ್ರಚಾರ ಮಾಡುತ್ತೇನೆ. ನನ್ನ ವಜಾಗೊಳಿಸಿರುವುದು ಹಿಂದುಳಿದ ವರ್ಗದ ನಾಯಕನಿಗೆ ಮಾಡಿರುವ ಅನ್ಯಾಯ. ಈ ಅನ್ಯಾಯಕ್ಕೆ ಜನತೆ ತಕ್ಕ ಕಲಿಸುತ್ತಾರೆ. ಮಾತಿಗೆ ತಪ್ಪಿದ ಕುಮಾರಸ್ವಾಮಿಗೆ ಬುದ್ಧಿ ಕಲಿಸಿದಂತೆ ಯಡಿಯೂರಪ್ಪಗೂ ಜನರು ಬುದ್ದಿ ಕಲಿಸುತ್ತಾರೆ ಎಂದು ಪ್ರಕಾಶ ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications