ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಇನ್ನು ಮೇಲೆ ಚಳವಳಿ ಮಾಡುವುದಿಲ್ಲ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

S. Bangarappa
ಶಿವಮೊಗ್ಗ, ಜೂ. 15 : ಇನ್ನು ಮೇಲೆ ನಾನು ಚಳವಳಿಗಳನ್ನು ಮಾಡುವುದಿಲ್ಲ. ಜನರಿಗೆ ಚಳವಳಿ ಮಾಡಬೇಕು ಅಂತ ಅನ್ನಿಸಿದರೆ ಮೊದಲು ಅವರೇ ಚಳವಳಿ ಮಾಡಲಿ. ನಾನು ಸೋತಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಥವಾ ಅವರ ಮಗನ ವಿರುದ್ಧ ಅಲ್ಲ. ಹಣ, ಹೆಂಡಕ್ಕೆ ನಾನು ಸೋಲುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸೋಲಿಗೆ ಕಾರಣ ಕಂಡುಕೊಂಡಿದ್ದಾರೆ.

ಭಾನುವಾರದಂದು ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನಾನು ಬಂಗಾರಪ್ಪ. ಇಂತಹ ಸೋಲುಗಳಿಗೆಲ್ಲಾ ತಲೆಬಾಗುವವನಲ್ಲ. ಸೋಲಿನಿಂದ ಬೇಸರವಾಗಿ ರಾಜಕಾರಣ ಬಿಡುವ ಬಂಗಾರಪ್ಪ ನಾನಲ್ಲ. ನನ್ನ ಹೋರಾಟ ಹಾಗೂ ರಾಜಕಾರಣ ಕೊನೆಯವರೆಗೂ ಇರುತ್ತದೆ ಎಂದು ವಿವರಿಸಿದರು.

ನಾನು ಸೋತಿದ್ದು ಅತೀ ಆತ್ಮವಿಶ್ವಾಸದಿಂದ ಎಂದು ಹೇಳುವುದು ಸರಿಯಲ್ಲ. ಎಲ್ಲರೂ ಈ ಚುನಾವಣೆಯನ್ನು ಗಮನಿಸಿದ್ದಾರೆ. ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿದಿದ್ದರಿಂದ ನಾನು ಸೋಲಬೇಕಾಯಿತು. ನಾನು ಚಳವಳಿ ಮಾಡುತ್ತಾ ಕುಳಿತುಕೊಂಡರೆ ಜನ ಹಣ, ಹೆಂಡ ಪಡೆದು ನನ್ನನ್ನು ಸೋಲಿಸುತ್ತಲೇ ಇರುತ್ತಾರೆ. ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಾವೇ ಚಳವಳಿ ಮಾಡಲು ಸಿದ್ಧರಾಗಲಿ. ಅಲ್ಲಿಯವರೆಗೆ ನಾನೂ ಚಳವಳಿ ಮಾಡುವುದಿಲ್ಲ ಎಂದು ತಮ್ಮ ಸೋಲನ್ನು ವಿಶ್ಲೇಷಿಸಿಕೊಂಡರು.

ನನ್ನ ರಾಜಕಾರಣದ ಬದುಕಿನಲ್ಲಿ ಯಾರಿಗೂ ಮೋಸ ಮಾಡಿದವನಲ್ಲ. ನಾನು ಪದವಿಗಳಲ್ಲಿದ್ದ ಸಂದರ್ಭಗಳಲ್ಲಿ ನನ್ನ ದೂರವಾಣಿ ಯಾವತ್ತೂ ಸಮಸ್ಯೆಗಳನ್ನು ಸ್ವೀಕರಿಸಲು ಸಿದ್ಧವಿರುತ್ತಿತ್ತು. ಆ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿರುತ್ತಿದ್ದೆ. ಜನರು ಈಗ ಬದಲಾದಂತಿದ್ದಾರೆ. ಚುನಾವಣೆಯ ಸಂದರ್ಭಗಳಲ್ಲಿ ಹಣ, ಹೆಂಡ ಪಡೆದು ಮತ ಚಲಾಯಿಸುವ ಮಟ್ಟಕ್ಕೆ ವಾತಾವರಣವಿದೆ. ಇದು ಸಾಕಷ್ಟು ಬೇಸರದ ವಿಷಯ. ಚುನಾವಣೆ ಮುಗಿದರೂ ಸಹ ರಾಮಚಂದ್ರಾಪುರ ಮಠದ ವಿಷಯವನ್ನು ಕೈಬಿಡುವುದಿಲ್ಲ. ಅದೊಂದು ಸಾರ್ವಜನಿಕ ಸಮಸ್ಯೆ. ಆ ಬಗ್ಗೆ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ಬಂಗಾರಪ್ಪ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸಲು ಸಿದ್ಧ. ಇಂಥದ್ದೇ ಜವಾಬ್ದಾರಿ ನೀಡಿ ಎಂದು ನಾನು ಕೇಳಲು ಹೋಗುವುದಿಲ್ಲ ಎಂದು ಬಂಗಾರಪ್ಪ ನುಡಿದರು. ಪತ್ರಕರ್ತರು, ನೀವು ರಾಜ್ಯಪಾಲರಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದಾಗ, ಬಂಗಾರಪ್ಪ ನಗುತ್ತಲೇ, ಕರ್ನಾಟಕದ ರಾಜ್ಯಪಾಲ ಸ್ಥಾನಾನ? ಎಂದು ಮರು ಪ್ರಶ್ನೆ ಹಾಕಿದರು.

ದಂಡಾವತಿ ಯೋಜನೆ ಕುರಿತು ಪ್ರಶ್ನಿಸಿದಾಗ, ಯಡಿಯೂರಪ್ಪ ಹಠ ಮತ್ತು ಛಲಕ್ಕಾಗಿ ಅಧಿಕಾರ ಮಾಡುವುದನ್ನು ಕೈಬಿಡಲಿ. ಆಗ ದಂಡಾವತಿಯ ಸಮಸ್ಯೆ ಏನೆಂಬುದು ಅವರಿಗೆ ಅರ್ಥವಾಗುತ್ತದೆ. ಎಲ್ಲಾ ಅಣೆಕಟ್ಟುಗಳ ಫೋಟೋ ಹಾಕಿಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ದೊಡ್ಡ ದೊಡ್ಡ ಜಾಹೀರಾತುಗಳನ್ನು ತಾವೇ ನಿರ್ಮಿಸಿದವರಂತೆ ನಾಚಿಕೆ ಬಿಟ್ಟು ನೀಡುತ್ತಿದ್ದಾರೆ. ಇಷ್ಟೊಂದು ನಾಚಿಕೆಗೇಡಿನ ಪ್ರಚಾರ ಯಾವ ಮುಖ್ಯಮಂತ್ರಿಗಳ ಕಾಲದಲ್ಲಿಯೂ ಆಗಿರಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿರುವುದು ನಿಜ. ಕಳೆದ ಲೋಕಸಭಾ ಚುನಾವಣೆಯಲ್ಲಿ 8 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ 8 ಸ್ಥಾನಗಳನ್ನಷ್ಟೇ ಪಡೆಯಿತು. ಈ ಮೂಲಕ ಕಾಂಗ್ರೆಸ್‌ನ ಶಕ್ತಿ ಏನೆಂಬುದು ತಿಳಿಯುವಂತಾಗಿದೆ. ಈಗಲಾದರೂ ಪಕ್ಷವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಬಂಗಾರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X