ಪ್ರಕೃತಿ ನಿಯಮಕ್ಕೆ ತಲೆಬಾಗಿದ ಬಿದಿರ ರಾಶಿ

ಅತ್ತ ಸಾಗುವಾಗ ಗಮನಿಸಿದರೆ ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಬಿದಿರ ಮರಗಳು ಅನಾಥವಾಗಿ ಒಣಗಿ ನಿಂತಿರುವುದು ಎಂಥವರಿಗೂ ಆಶ್ಚರ್ಯದ ಜೊತೆ ಮರುಕ ಹುಟ್ಟಿಸುತ್ತದೆ. ಏಕೆಂದರೆ ಇದೆ ಬಿದಿರು ಹಸಿರಾಗಿದ್ದ ಕಾಲದಲ್ಲಿ ಇತ್ತ ಕಡೆ ಸಾಗುವಾಗ ಅಬ್ಬಾ... ಇದೆಂಥಾ ಬಿದಿರ ರಾಶಿಯಪ್ಪಾ ಎಲ್ಲಿ ನೋಡಿದರು ಬಿದಿರೇ ಕಾಣಿಸುತ್ತದೆ ಎಂಬುದರ ಜೊತೆಗೆ ಸೂರ್ಯನ ಕಿರಣವನ್ನು ನೋಡುವುದೇ ಕಷ್ಟ ಸಾಧ್ಯ. ಅಷ್ಟೊಂದು ದಟ್ಟ ಅರಣ್ಯ ಸಂಪತ್ತನ್ನು ಹೊಂದಿತ್ತು ಸಕ್ಕರೆಬೈಲು ಅರಣ್ಯ ಪ್ರದೇಶ. ಇಲ್ಲಿ ಸಾಗುವಾಗ ಸಾಗುವಾನಿ ಮರ ಬಿಟ್ಟರೆ ಬಿದಿರು ಮರಗಳ ಸಂಖ್ಯೆಯೇ ಹೆಚ್ಚಾಗಿತ್ತು.
ಆದರೆ, ಇಂದಿನ ಪರಿಸ್ಥಿತಿ ಬದಲಾಗಿದ್ದು, ಕಾಡು ಅರೆಬೆತ್ತಲಾಗಿ ಕಾಣಿಸುತ್ತಿದೆ. ಬಿದಿರು ಸಂಪೂರ್ಣವಾಗಿ ಒಣಗಿ ನಿಂತಿದ್ದು, ಇಲ್ಲಿರುವ ಆನೆಗಳಿಗೆ ಆಹಾರವಾಗಿದ್ದ ಪ್ರಾಣಿಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಬಿದಿರು ಇಲ್ಲದಂತಾಗಿದೆ. ಹೀಗೇಕೆ ಬಿದಿರು ಸಂಪೂರ್ಣವಾಗಿ ಒಣಗಿದೆಂಬುದಕ್ಕೆ ಕಾರಣ ತಿಳಿಯಲು ಇಲ್ಲಿನ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿಯಾಗಿರುವ ಸ್ಮಿತಾ ಬಜ್ಜೂರ್‌ರವರನ್ನು ಸಂಪರ್ಕಿಸಿದಾಗ ತಿಳಿದುಬಂದ ಮಾಹಿತಿ ಏನೆಂದರೆ, ಹುಲ್ಲಿನ ಜಾತಿಗೆ ಸೇರಿದ ಬಿದಿರು ಮರಗಳ ಜೀವಿತಾವಧಿಯೇ 60ರಿಂದ 65ವರ್ಷ. ಇಷ್ಟು ವರ್ಷ ಬದುಕಿದ್ದು, ನಂತರ ಹೂ ಬಿಟ್ಟು ಬಿದಿರ ಅಕ್ಕಿಯಾಗಿ ನಂತರ ಒಣಗಿ ಹೋಗುತ್ತದೆಂದು ತಿಳಿಸಿದರು. ಪ್ರಕೃತಿ ನೀಡಿರುವ ಆಯುಷ್ಯ 60 ವರ್ಷವಾಗಿರುವಾಗ ಇದನ್ನು ಯಾರಿಂದಲೂ ತಡೆಗಟ್ಟಲು ಸಾಧ್ಯವಾಗಲಾರದು.
ಅವರೇ ಹೇಳುವಂತೆ ಇನ್ನು ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಮತ್ತೆ ಬಿದಿರು ತಾನಾಗಿಯೇ ಬೆಳೆಯಲಿದ್ದು, ಹಿಂದಿದ್ದಂತೆ ದೊಡ್ಡದಾಗಿ ಬೆಳೆಯಲು 15ರಿಂದ 20 ವರ್ಷಗಳಷ್ಟು ಕಾಲ ಬೇಕಾಗಬಹುದೆಂದು ವಿವರಿಸಿದರು. ಒಣಗಿ ನಿಂತಿರುವ ಬಿದಿರಿನಿಂದ ಒಂದು ಸಮಸ್ಯೆಯೆಂದರೆ ಸ್ವಲ್ಪ ಬೆಂಕಿ ಬಿದ್ದರೂ ಅಪಾರ ಪ್ರಮಾಣದ ವನ್ಯ ಸಂಪತ್ತು, ವನ್ಯ ಜೀವಿಗಳು ನಾಶವಾಗುವ ಭೀತಿಯನ್ನು ವ್ಯಕ್ತಪಡಿಸಿದರು.
ಅಂದಾಜು ಸುಮಾರು 3320 ಟನ್‌ಗಳಷ್ಟು ಬಿದಿರು ಒಣಗಿನಿಂತಿದ್ದು, ಅವುಗಳನ್ನು ಮಾರಾಟ ಮಾಡಿದ್ದರೆ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ.ಗಳಷ್ಟು ಆದಾಯ ಬರುತ್ತಿತ್ತು. ಆದರೆ, ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದಾಗಿ, ಒಂದು ಸಣ್ಣ ಕಡ್ಡಿಯನ್ನೂ ಆದಾಯ ಪಡೆಯುವ ದೃಷ್ಟಿಯಿಂದ ಮಾರುವಂತಿಲ್ಲ. ಜೊತೆಗೆ ಒಣಗಿದ ಬಿದಿರನ್ನು ಅಲ್ಲಿಂದ ತೆಗೆದರೆ ಅಲ್ಲಿರುವ ಹುಳು, ಹುಪ್ಪಟೆಗಳು ನಾಶವಾಗುವ ಸಂಭವವಿದ್ದು, ರಕ್ಷಿತ ಅರಣ್ಯ ಪ್ರದೇಶದಿಂದ ಆದಾಯಕ್ಕಾಗಿ ಯಾವುದೇ ವಸ್ತವನ್ನು ಸಾಗಾಣೆ ಮಾಡಬೇಕಾದರೆ ಕೇಂದ್ರ ಸರಕಾರದ ಅನುಮತಿ ಪಡೆಯಬೇಕು. ಇದು ಸರಕಾರದ ನಿಯಮ.
ಹೀಗಾಗಿ ಇಲಾಖೆಯವರು ಒಣಗಿದ ಬಿದಿರನ್ನು ಸಾಗಿಸಲು ಸರಕಾರಕ್ಕೆ ಈಗಾಗಲೇ ಮನವಿ ಮಾಡಿದ್ದರು. ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ರಾಶಿ ರಾಶಿ ಬಿದಿರು ನಾಶವಾಗುವ ಸಂಭವವೇ ಹೆಚ್ಚಾಗಿದೆ. ಜೊತೆಗೆ ಒಣಗಿದ ಬಿದಿರು ಯಾವ ಉಪಯೋಗಕ್ಕೂ ಬರುವುದಿಲ್ಲ. ಒಣಗುವ ಮೊದಲೇ ಇದನ್ನು ಪೇಪರ್ ಕಾರ್ಖಾನೆಗೆ, ಇತರೇ ಗೃಹಪಯೋಗಿ ವಸ್ತುಗಳ ನಿರ್ಮಾಣಕ್ಕೆ ಕೊಟ್ಟಿದ್ದರೆ ಉಪಯೋಗಕ್ಕೆ ಬರುತ್ತಿತ್ತು. ಆದರೆ, ಸರಕಾರಕ್ಕೆ ಇದ್ಯಾವುದೂ ಗಮನಕ್ಕೆ ಬರಲಿಲ್ಲ. ಕೋಟ್ಯಾಂತರ ರೂ. ಮೌಲ್ಯದ ಬಿದಿರು ಸಂಪೂರ್ಣ ನಾಶವಾಗಿದೆ.
ಒಂದು ಕಡೆ ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದರೆ, ಈಗ ಪ್ರಕೃತಿಯ ನಿಯಮಕ್ಕನುಸಾರವಾಗಿ ನಾಶಹೊಂದುವಂತಾಗಿದೆ. ಇದರಿಂದಾಗಿ ಎಷ್ಟೋ ಜೀವ ಸಂಕುಲಗಳಿಗೆ ಆಶ್ರಯ ತಾಣವಾಗಿದ್ದ, ಆನೆಗಳಿಗೆ ಆಹಾರದ ವಸ್ತುವಾಗಿದ್ದ, ಪ್ರಯಾಣಿಕರಿಗೆ ಸ್ವಾಗತ ನೀಡುವಂತಿದ್ದ ಹಚ್ಚ ಹಸಿರ ಬಿದಿರ ಕಾಡು ನಮ್ಮಿಂದ ಮರೆಯಾಗಿದೆ. ಮತ್ತೆ ತನ್ನ ಗತ ವೈಭವವವನ್ನು ಪಡೆಯಲು ಎಷ್ಟು ವರ್ಷಗಳು ಬೇಕೋ... ಯಾರೇ ಆಗಲಿ ಪ್ರಕೃತಿ ನಿಯಮಕ್ಕೆ ತಲೆಬಾಗಲೇ ಬೇಕಲ್ಲ?












Click it and Unblock the Notifications