ಅದೃಷ್ಟ ಯಾವ ರೂಪದಲ್ಲಿ ಬರುತ್ತೋ ಯಾರಿಗ್ಗೊತ್ತು?

ಗೃಹ ಸಚಿವ ಪಿ. ಚಿದಂಬರಂ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ, ಉದ್ಯಮಿ ನವೀನ್ ಜಿಂದಾಲ್... ಎಲ್ಲರೂ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವ ಪ್ರಧಾನಿ ಮನಮೋಹನ ಸಿಂಗ್ ಅವರ ಮೇಲೆಯೂ ಚಪ್ಪಲಿ ಎಸೆಯಲಾಗಿತ್ತು. ಅವರು ಖುದ್ದು ಚುನಾವಣೆ ಎದುರಿಸದಿದ್ದರೂ 15ನೇ ಲೋಕಸಭೆಯಲ್ಲಿಯೂ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಹೀಗಾಗಿ ಅವರು ಕೂಡ ಗೆದ್ದಂತೆಯೇ ಸೈ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆಯೂ ಜೆಡಿಎಸ್ ಕಾರ್ಯಕರ್ತ ಚಪ್ಪಲಿ ಎಸೆದು ಅವರ ಕೋಪಕ್ಕೆ ತುತ್ತಾಗಿದ್ದ. ಅವರು ಲೋಕಸಭೆ ಚುನಾವಣೆಗೆ ನಿಂತಿರದಿದ್ದರೂ ಅವರ ಮಗ ರಾಘವೇಂದ್ರ ಅವರು ಬಂಗಾರಪ್ಪ ಅವರನ್ನು ಸೋಲಿಸಿ ಶಿವಮೊಗ್ಗದಲ್ಲಿ ಗೆದ್ದುಬಂದಿದ್ದಾರೆ. ಹೀಗಾಗಿ ಯಡಿಯೂರಪ್ಪನವರಿಗೆ ಇನ್ನೊಂದು ರೀತಿಯಲ್ಲಿ ಅದೃಷ್ಟ ಒಲಿದುಬಂದಿದೆ. ಇಷ್ಟು ಮಾತ್ರವಲ್ಲದೆ, ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, 28ರಲ್ಲಿ 19 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಸದ್ಯಕ್ಕಂತೂ ಯಡಿಯೂರಪ್ಪನವರ ಕುರ್ಚಿಗೆ ಭಂಗ ಬರುವ ಸಾಧ್ಯತೆಯಿಲ್ಲ.
ಈ ಐವರೂ ಲೋಕಸಭೆಯ ಚುನಾವಣಾ ಪ್ರಚಾರ ಮಾಡುತ್ತಿರುವಾಗ ಚಪ್ಪಲಿ ಎಸೆತಕ್ಕೆ ಒಳಗಾಗಿದ್ದರು. ಏಪ್ರಿಲ್ 8ರಂದು ಜರ್ನೇಲ್ ಸಿಂಗ್ ಎಂಬ ಪತ್ರಕರ್ತ ಪಿ. ಚಿದಂಬರಂ ಮೇಲೆ ಬೂಟು ಎಸೆದು ಈ ಸರಣಿಗೆ ನಾಂದಿ ಹಾಡಿದ್ದ. ಆಮೇಲೆ ಸಾಲುಸಾಲಾಗಿ ಉಳಿದವರೂ ಇದೇ ಪ್ರಯೋಗಕ್ಕೆ ಒಳಗಾಗಿದ್ದರು. ಇವರಲ್ಲಿ ಚಿದಂಬರಂ ಸೋತು ಸೋತು ಗೆದ್ದಿದ್ದಾರೆ. ಶಿವಗಂಗಾ ಕ್ಷೇತ್ರದಲ್ಲಿ ಆರಂಭದಲ್ಲಿ ಅವರು ಸೋತಿದ್ದಾರೆ ಎಂದು ಘೋಷಿಸಲಾಗಿತ್ತು. ನಂತರ ಮರುಎಣಿಕೆಯಲ್ಲಿ ಜಯಶಾಲಿಯಾದರು. ಅದೃಷ್ಟ ಎಂದರೆ ಇದೇ ಅಲ್ಲವೆ?
ಸ್ವಲ್ಪ ಮಟ್ಟಿಗೆ ದುರಾದೃಷ್ಟ ವಕ್ಕರಿಸಿದ್ದೆಂದರೆ ಪ್ರಧಾನಿ ಆಕಾಂಕ್ಷಿಯಾಗಿದ್ದ ಅಡ್ವಾಣಿಯವರಿಗೆ. ಗುಜರಾತ್ ನ ಗಾಂಧಿನಗರದಲ್ಲಿ ಅವರು ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದರೂ ಪ್ರಧಾನಿ ಪಟ್ಟ ಕೈತಪ್ಪಿ ನಿರಾಸೆ ತಂದಿದೆ.
(ಏಜೆನ್ಸೀಸ್)












Click it and Unblock the Notifications