ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಅರಳಿದ ಕಮಲ, ಮುದುಡಿದ ಕಾಂಗ್ರೆಸ್

By Staff
|
Google Oneindia Kannada News

Yeddyurappa has the last laugh in Karnataka
ಬೆಂಗಳೂರು, ಮೇ 16 : ರಾಷ್ಟ್ರಮಟ್ಟದಲ್ಲಿ ಬಾರತೀಯ ಜನತಾ ಪಕ್ಷ ಸೋಲಿನ ಕಹಿ ಉಂಡಿದ್ದರೂ ಕರ್ನಾಟಕದಲ್ಲಿ ಮೃಷ್ಟಾನ್ನ ಭೋಜನ ಮಾಡಿದೆ. 28 ಕ್ಷೇತ್ರಗಳಲ್ಲಿ 19 ಕ್ಷೇತ್ರಗಳನ್ನು ಬಾಚಿಕೊಂಡು ರಾಜ್ಯದಲ್ಲಿ ತಾನಿನ್ನೂ ಪ್ರಬಲ ಎಂಬುದನ್ನು ಸಾಬೀತುಪಡಿಸಿದೆ. ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿಯಲು ವಿದ್ಯುಕ್ತವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಮಣ್ಣುಮುಕ್ಕಿದೆ. ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಲು ಯಶಸ್ವಿಯಾಗಿದೆ. ಉಳಿದ ಮೂರನ್ನು ಜೆಡಿಎಸ್ ತನ್ನ ಪಾಲು ಮಾಡಿಕೊಂಡಿದೆ.

ಯುವಕರಿಗೆ ಮತ್ತು ಹೊಸಬರಿಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವರ್ಚಸ್ಸು ಸೇರಿದಂತೆ ಬಿವೈ ರಾಘವೇಂದ್ರ, ಜನಾರ್ಧನ ಸ್ವಾಮಿ, ರಮೇಶ್ ಕತ್ತಿ, ಶಾಂತಾ ಮೊದಲಾದ ಯುವನೇತಾರರನ್ನು ಸ್ಪರ್ಧೆಗಿಳಿಸಿದ್ದು ನಿರೀಕ್ಷಿತ ಫಲ ನೀಡಿದೆ.

ಇದಕ್ಕೆ ವ್ಯತಿರಿಕ್ತವಾಗಿ ಹಳೆಯ ತಲೆಗಳನ್ನೇ ಕಾಂಗ್ರೆಸ್ ಚುನಾವಣೆಗಿಳಿಸಿದ್ದು ಅದಕ್ಕೆ ಮುಳುವಾಯಿತು. ಧರಂಸಿಂಗ್, ವೀರಪ್ಪ ಮೊಯ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದರೂ ಹಳೆತಲೆಗಳೆಲ್ಲ ಉರುಳಿವೆ. ಜನಾರ್ಧನ ಪೂಜಾರಿ, ಮಾರ್ಗರೇಟ್ ಆಳ್ವಾ, ಅಂಬರೀಷ್, ಬಂಗಾರಪ್ಪ, ಸಿಕೆ ಜಾಫರ್ ಷರೀಫ್, ಸಾಂಗ್ಲಿಯಾನಾ, ತೇಜಸ್ವಿನಿ ಗೌಡ ಗೆಲುವಿನ ಕುದುರೆಗಳಲ್ಲ ಎಂಬುದನ್ನು ಮತದಾರರೇ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರದಿದ್ದ ಜಾತ್ಯತೀತ ಜನತಾದಳ ನಿರೀಕ್ಷೆಯಂತೆ ಮೂರು ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (ಹಾಸನ), ಎಚ್.ಡಿ.ಕುಮಾರಸ್ವಾಮಿ (ಬೆಂಗಳೂರು ಗ್ರಾಮಾಂತರ) ಮತ್ತು ಚೆಲುವರಾಯಸ್ವಾಮಿ (ಮಂಡ್ಯ) ಗೆಲುವಿನ ನಗೆ ಬೀರಿದ್ದಾರೆ.

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಆರಂಭದಲ್ಲಿ ಸಾಕಷ್ಟು ತಲ್ಲಣಗಳನ್ನು ಸೃಷ್ಟಿಸಿತ್ತು. ಪ್ರಾರಂಭದ ಮತಎಣಿಕೆಯಲ್ಲಿ ಕಾಂಗ್ರೆಸ್ ನ ಯುವ ನಾಯಕ ಕೃಷ್ಣ ಭೈರೇಗೌಡ ಅವರು ಬಿಜೆಪಿಯ ಅನಂತಕುಮಾರ್ ಅವರಿಗಿಂತ ಮುಂದೆ ಸಾಗಿ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗುವಂತೆ ಮಾಡಿದ್ದರು. ಆದರೆ ಮುಂದಿನ ಮತಎಣಿಕೆಯಲ್ಲಿ ಊಹಾಪೋಹಗಳಿಗೆ ಅವಕಾಶ ನೀಡದಂತೆ ಅನಂತಕುಮಾರ್ ಮುನ್ನಡೆ ಸಾಧಿಸಿ ಜಯಶಾಲಿಯಾದರು. ಅವರು ಐದನೆಯ ಬಾರಿಗೆ ಸಂಸತ್ತನ್ನು ಪ್ರವೇಶಿಸುತ್ತಿದ್ದಾರೆ.

ನಿರೀಕ್ಷೆಗೂ ಮೀರಿ ಅಚ್ಚರಿಯ ಫಲಿತಾಂಶ ಬಂದಿದ್ದು ಶಿವಮೊಗ್ಗದಲ್ಲಿ. ಪ್ರಥಮಬಾರಿಗೆ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿಯವರು ಮಗ ರಾಘವೇಂದ್ರ ಕಾಂಗ್ರೆಸ್ ಹಿರಿಯ ನಾಯಕ ಬಂಗಾರಪ್ಪನವರಿಗೆ ಮೇಲೇಳದಂತೆ ಹೊಡೆತ ಕೊಟ್ಟಿದ್ದಾರೆ. ಚಿತ್ರದುರ್ಗದಲ್ಲಿಯೂ ಕೂಡ ಪ್ರಥಮ ಬಾರಿಗೆ ಸ್ಪರ್ಧಿಸಿದ ಜನಾರ್ಧನ ಸ್ವಾಮಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಕಲ್ಲುಕಲ್ಲಿನಲಿ ಗೆಲುವಿನ ಹೂ ಅರಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವ ಎನ್ಆರ್ಐಗಳು ಗೆಲ್ಲಲಾರರು ಎಂಬ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಭಾರತಕ್ಕೆ ಬಂದು ನೆಲೆಸಿರುವುದು ಅವರ ಗೆಲುವಿಗೆ ದಾರಿಮಾಡಿಕೊಟ್ಟಿದ್ದು ಸುಳ್ಳಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X