ಅರ್ಕಾವತಿ ಲೇಔಟ್ ಗೆ ಭಾರಿ ವಿರೋಧ, ಪ್ರತಿಭಟನೆ

ಜಕ್ಕೂರಿನ ಅರ್ಕಾವತಿ ಬಡಾವಣೆಯಲ್ಲಿ ಬಿಡಿಎ ಜಮೀನು ಒತ್ತುವರಿ ಮಾಡಿಕೊಂಡು ಅದರಲ್ಲಿ 25 ಎಕರೆ ಜಾಗದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ನಿವೇಶನ ಮಾಡಿಕೊಡಲು ಇಂದು ಬೆಳಗ್ಗೆ ಕೆಲ ಅಧಿಕಾರಿಗಳೊಂದಿಗೆ ಬಿಗಿ ಪೊಲೀಸ್ ಕಾವಲಿನಲ್ಲಿ ಮೆಟ್ರೋ ಪಾಲಿಟನ್ ಹೌಸಿಂಗ್ ಸೊಸೈಟಿಯವರು ಗ್ರಾಮಸ್ಥರಿಗೆ ತಿಳಿಯದಂತೆ ಪೂಜೆ ನೆರವೇರಿಸಲು ಮುಂದಾಗಿದ್ದಾರೆ. ಇದನ್ನು ತಿಳಿದ ಸಾವಿರಾರು ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದಾರೆ. ಗ್ರಾಮಸ್ಥರ ಪ್ರತಿಭಟನೆ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಬೆಂಬಲ ನೀಡಿವೆ.
ಕಳೆದ ಎರಡು ವರ್ಷಗಳಿಂದ ಅರ್ಕಾವತಿ ಭೂವಿವಾದ ನ್ಯಾಯಾಲಯದಲ್ಲಿದೆ. ಸುಪ್ರಿಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಇತ್ತ ಹೈಕೋರ್ಟ್ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಿಡಿಎ ನೀಡಲು ಉದ್ದೇಶಿಸಿರುವ 25 ಎಕರೆ ಜಮೀನಿನಲ್ಲಿ 6 ಎಕರೆ ಯಾವುದೇ ತಗಾದೆ ಇಲ್ಲ ದ ಕಾರಣ ಅಲ್ಲಿ ನಿವೇಶನ ಅಭಿವೃದ್ಧಿಪಡಿಸಬಹುದು ಎಂದು ಆದೇಶ ನೀಡಿರುವುದರಿಂದ ಆ ಭಾಗದಲ್ಲಿ ಮೆಟ್ರೋ ಪಾಲಿಟನ್ ಹೌಸಿಂಗ್ ಸೊಸೈಟಿಯವರಿಗೆ ಬಿಡಿಎ ನಿವೇಶನ ನೀಡಲು ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಭೂಮಿ ಪೂಜೆದೆ ತೆರಳಿದ್ದಾಗ ಗ್ರಾಮಸ್ಥರು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರು.
ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ನೀಡಿದ್ದರೂ ಸರಕಾರ ಇಂತಹ ಕ್ರಮಕ್ಕೆ ಮುಂದಾಗಿರುವುದು ಬಿಜೆಪಿ ಸರಕಾರಕ್ಕೆ ರೈತರ ಪರ ಕಾಳಜಿ ಏನೆಂದು ಗೊತ್ತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿರೋಧದ ನಡುವೆಯೂ ಪೋಲಿಸ್ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ನಡೆಸಿದರೆ ಜನತಾದಳ ಉಗ್ರ ಪ್ರತಿಭಟನೆ ನಡೆಸುವುದಾಗಿ ಸರಕಾರವನ್ನು ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications